ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ಯೇಸುಕ್ರಿಸ್ತನಿಗೆ ಹೋಲಿಸಿಕೊಳ್ಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಇತ್ತೀಚೆಗೆ ಅವರು ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ AI ಸೃಜಿತ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಯೇಸುಕ್ರಿಸ್ತನು ಪವಾಡದ ಮೂಲಕ ರೋಗಿಯೊಬ್ಬನನ್ನು ಗುಣಪಡಿಸುವಂತೆ ಟ್ರಂಪ್ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಿನ್ನೆಲೆಯಲ್ಲಿ ಅಮೆರಿಕದ ಧ್ವಜ, ಯುದ್ಧ ವಿಮಾನಗಳು, ಸ್ಟಾಚ್ಯೂ ಆಫ್ ಲಿಬರ್ಟಿ ಮತ್ತು ಹದ್ದುಗಳು ಹಾರಾಡುವ ದೃಶ್ಯಗಳಿವೆ. ಇದು ಕೇವಲ ಚಿತ್ರವಲ್ಲ, ಬದಲಿಗೆ ತನ್ನನ್ನು ಟೀಕಿಸಿದ ಪೋಪ್ ಅವರಿಗೆ ಟ್ರಂಪ್ ನೀಡಿದ ನೇರ ತಿರುಗೇಟು ಎಂದು ವಿಶ್ಲೇಷಿಸಲಾಗುತ್ತಿದೆ.

ಪೋಪ್ 14ನೇ ಲಿಯೋ ಅವರು ಈ ಹಿಂದೆ ಟ್ರಂಪ್ ಅವರ ಯುದ್ಧೋತ್ಸಾಹದ ನೀತಿಗಳನ್ನು ಟೀಕಿಸಿದ್ದರು. “ಯೇಸು ಶಾಂತಿಯ ಸಂಕೇತ, ಅವರು ಯುದ್ಧವನ್ನು ಬೆಂಬಲಿಸುವುದಿಲ್ಲ. ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಸಮರ್ಥಿಸಿಕೊಳ್ಳುವುದು ತಪ್ಪು” ಎಂದು ಪೋಪ್ ಹೇಳಿದ್ದರು.
ಇದಕ್ಕೆ ಕೆಂಡಾಮಂಡಲರಾದ ಟ್ರಂಪ್, “ಪೋಪ್ ಅವರಿಗೆ ವಿದೇಶಾಂಗ ನೀತಿಯ ಜ್ಞಾನವಿಲ್ಲ. ಅವರು ಅಪರಾಧಗಳ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ನಾನು ಅವರ ಅಭಿಮಾನಿಯೇನಲ್ಲ, ಅವರು ತಮ್ಮ ಕೆಲಸ ತಾವು ಮಾಡಿದರೆ ಸಾಕು” ಎಂದು ಗುಡುಗಿದ್ದರು. ಇದೀಗ ಈ AI ಚಿತ್ರದ ಮೂಲಕ ಟ್ರಂಪ್ ತಮ್ಮ ಆಕ್ರಮಣಕಾರಿ ನಿಲುವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ.



