ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ 2025ರಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರೂ, ಇದೀಗ ತಮ್ಮ ಕ್ರಿಕೆಟ್ ವೃತ್ತಿಜೀವನದ ಕೊನೆಯ ಹಂತದಲ್ಲಿ ಭಾರತ ತಂಡಕ್ಕೆ ಮರಳುವ ಅವಕಾಶ ಕೈತಪ್ಪಿದ ಕುರಿತು ಮಹತ್ವದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಗಾಯದಿಂದ ಚೇತರಿಸಿಕೊಂಡ ಬಳಿಕ ಮತ್ತೆ ತಂಡಕ್ಕೆ ಮರಳುವ ವಿಶ್ವಾಸವನ್ನು ಅಂದಿನ ಕೋಚ್ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನೀಡಿದ್ದರು. ಆದರೆ, ಫಿಟ್ನೆಸ್ ಮರಳಿ ಪಡೆದ ನಂತರವೂ ತಂಡಕ್ಕೆ ವಾಪಸಾಗುವ ಕುರಿತು ಸ್ಪಷ್ಟ ಉತ್ತರ ಸಿಗಲಿಲ್ಲ ಎಂದು ಮಿಶ್ರಾ ಆರೋಪಿಸಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಡೆಸುವ ‘ಬೈಠ್ ಆ್ಯಂಡ್ ಬೋಲ್’ ಪಾಡ್ಕಾಸ್ಟ್ನಲ್ಲಿ ಅವರು ಈ ಅನುಭವ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಪಂದ್ಯವೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯ
2017ರಲ್ಲಿ ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮಿಶ್ರಾ ಗಾಯಗೊಂಡಿದ್ದರು. ಆ ಪಂದ್ಯವೇ ಭಾರತ ಪರ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಯಿತು. ಗಾಯದ ನಂತರ ತಂಡದಿಂದ ಹೊರಗುಳಿಯುವ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಧೈರ್ಯ ತುಂಬಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಸಂಪೂರ್ಣ ಫಿಟ್ ಆದ ಬಳಿಕ ಮತ್ತೆ ತಂಡಕ್ಕೆ ಮರಳಬಹುದು ಎಂಬ ಭರವಸೆಯನ್ನು ಕುಂಬ್ಳೆ ನೀಡಿದ್ದರು ಎಂಬುದು ಅವರ ಹೇಳಿಕೆ.
ನಂತರ ವಿರಾಟ್ ಕೊಹ್ಲಿಯನ್ನೂ ಸಂಪರ್ಕಿಸಿದ್ದಾಗಿ ಮಿಶ್ರಾ ತಿಳಿಸಿದ್ದಾರೆ. ಫಿಟ್ನೆಸ್ ಮರಳಿ ಪಡೆದರೆ ತಂಡದಲ್ಲಿ ಅವಕಾಶ ಸಿಗಲಿದೆ ಎಂಬ ಭರವಸೆಯನ್ನು ಕೊಹ್ಲಿ ಕೂಡ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಕರೆ ಮಾಡಿದರೂ ಉತ್ತರ ಸಿಗಲಿಲ್ಲ!
ಗಾಯದಿಂದ ಚೇತರಿಸಿಕೊಂಡ ಬಳಿಕ ತಂಡಕ್ಕೆ ಮರಳುವ ಸಾಧ್ಯತೆ ಕುರಿತು ಕೊಹ್ಲಿಯನ್ನು ವಿಚಾರಿಸಿದಾಗ, ಒಂದು ವಾರದಿಂದ ಹತ್ತು ದಿನಗಳಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದರು ಎಂದು ಮಿಶ್ರಾ ನೆನಪಿಸಿಕೊಂಡಿದ್ದಾರೆ. ಆದರೆ ವಾರಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ; ಕಳುಹಿಸಿದ ಸಂದೇಶಗಳಿಗೂ ಉತ್ತರ ಸಿಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಇತರ ಆಟಗಾರರು ದೀರ್ಘಕಾಲ ಗಾಯದಿಂದ ಹೊರಗುಳಿದಿದ್ದರೂ ಫಿಟ್ ಆದ ಬಳಿಕ ತಂಡಕ್ಕೆ ಮರಳಿದ ಉದಾಹರಣೆಗಳಿವೆ. ಆದರೆ ತಮ್ಮ ವಿಷಯದಲ್ಲಿ ಅಂತಹ ಅವಕಾಶ ದೊರೆಯಲಿಲ್ಲ ಎಂಬ ಅಸಮಾಧಾನವನ್ನೂ ಮಿಶ್ರಾ ವ್ಯಕ್ತಪಡಿಸಿದ್ದಾರೆ.
ಇಂದಿಗೂ ಉಳಿದಿರುವ ಪ್ರಶ್ನೆ
ತಂಡದಲ್ಲಿ ಸ್ಥಾನ ಪಡೆಯಲು ಕೇವಲ ಫಿಟ್ನೆಸ್ ಸಾಕಾಗುವುದಿಲ್ಲ; ಆಯ್ಕೆ ಪ್ರಕ್ರಿಯೆ ಮತ್ತು ತಂಡದ ಅಗತ್ಯಗಳೂ ಮುಖ್ಯವಾಗುತ್ತವೆ. ಆದರೂ, ತಮ್ಮ ವೃತ್ತಿಜೀವನದ ಅಂತಿಮ ಹಂತದಲ್ಲಿ ಸ್ಪಷ್ಟ ಉತ್ತರ ಸಿಗದಿರುವುದು ಮಿಶ್ರಾ ಅವರಲ್ಲಿ ಬೇಸರ ಮೂಡಿಸಿದೆ ಅನ್ನೋದು ಅವರ ಮಾತುಗಳಿಂದ ತಿಳಿಯುತ್ತದೆ.



