ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಕರೆ ಮಾಡಿ 5 ಕೋಟಿ ರೂಗೆ ಬೇಡಿಕೆ ಇಟ್ಟಿದ್ದ ಹಾವೇರಿ ವ್ಯಕ್ತಿ ಹೇಳಿಕೆ ಇದೀಗ ವೈರಲ್ ಆಗುತ್ತಿದೆ.
ಕರ್ನಾಟಕದ ಹಾವೇರಿಯಲ್ಲಿ ಬಂಧನಕ್ಕೀಡಾಗಿದ್ದ ಭಿಕಾ ರಾಮ್ ಬಿಷ್ಣೋಯ್, ‘ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿ ಜೈಲುಪಾಲಾಗಿರುವುದಕ್ಕೆ ನನಗಾವುದೇ ಪಶ್ಚಾತ್ಥಾಪವಿಲ್ಲ.. ಬಿಷ್ಣೋಯ್ ಸಮುದಾಯಕ್ಕಾಗಿ ಜೈಲಿಗೆ ಹೋಗಿದ್ದಕ್ಕೆ ನನಗೆ ಯಾವುದೇ ವಿಷಾದವಿಲ್ಲ ಎಂದು ಹೇಳಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಂಡು ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ನೀಡಿ 5 ಕೋಟಿ ರುಪಾಯಿ ಬೇಡಿಕೆಯಿಟ್ಟ ಆರೋಪದ ಮೇಲೆ ಭಿಕಾ ರಾಮ್ ಬಿಷ್ಣೋಯ್ ನನ್ನು ಬಂಧಿಸಲಾಗಿದೆ. ಪ್ರಸ್ತುತ ವರ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ, ‘ಬೆದರಿಕೆ ಹಾಕಿ ಪೊಲೀಸರಿಂದ ಬಂಧನಕ್ಕೀಡಾಗಿದ್ದಕ್ಕೆ ತನಗೆ ಯಾವುದೇ ವಿಷಾದವಿಲ್ಲ. ಬಿಷ್ಣೋಯ್ ಸಮುದಾಯಕ್ಕಾಗಿ ಜೈಲಿಗೆ ಹೋಗಿದ್ದಕ್ಕೆ ನನಗೆ ಖುಷಿ ಇದೆ. ಲಾರೆನ್ಸ್ ಬಿಷ್ಣೋಯ್ ತನ್ನ ಆರಾಧ್ಯ ದೈವವಾಗಿದ್ದು, ಬಿಷ್ಣೋಯ್ ಸಮುದಾಯಕ್ಕೆ ಮಂದಿರ ನಿರ್ಮಿಸಲು ಸಲ್ಮಾನ್ ಖಾನ್ ಬಳಿ 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾಗಿ ಆತ ಬಹಿರಂಗಪಡಿಸಿದ್ದಾನೆ ಎಂದು ಹೇಳಿದ್ದಾರೆ.
ಇನ್ನು ಆರೋಪಿ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ನ ಅಭಿಮಾನಿಯಾಗಿದ್ದು, ಲಾರೆನ್ಸ್ ವಿಡಿಯೊಗಳನ್ನು ನಿಯಮಿತವಾಗಿ ವೀಕ್ಷಿಸುತ್ತಿದ್ದ. ಜೈಲಿನೊಳಗಿಂದಲೇ ಬಿಷ್ಣೋಯ್ ಸಮುದಾಯಕ್ಕಾಗಿ ಸಾಕಷ್ಟು ಮಾಡುತ್ತಿದ್ದಾರೆ ಎಂದು ಹೆಮ್ಮೆಪಡುತ್ತಿದ್ದ. ಅಂತೆಯೇ ಹಿಟ್ ಅಂಡ್ ರನ್ ಪ್ರಕರಣವಾಗಲಿ ಅಥವಾ ಕೃಷ್ಣಮೃಗ ಬೇಟೆ ಪ್ರಕರಣವಾಗಲಿ ಸಲ್ಮಾನ್ ಖಾನ್ ತಾನು ಮಾಡಿದ ಯಾವುದೇ ಕೃತ್ಯಕ್ಕೆ ಕ್ಷಮೆ ಕೇಳಿಲ್ಲ. ಹೀಗಾಗಿ ಆತನ ವಿರುದ್ಧ ಲಾರೆನ್ಸ್ ಬಿಷ್ಣೋಯ್ ಮಾಡುತ್ತಿರುವುದು ಸರಿಯಾಗಿದೆ ಎಂದು ನಂಬಿದ್ದ ಎಂದು ಪೊಲೀಸರು ಹೇಳಿದ್ದಾರೆ.