ನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ಹಣೆ ಮಣಿಯಬೇಕು: ಮುಖ್ಯಮಂತ್ರಿ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ಸಮಾಜದ ಎಲ್ಲರು ಬೇದ-ಭಾವವಿಲ್ಲದೇ, ಮೇಲು-ಕೀಳು ಎನ್ನದೇ ಒಂದಾಗಿ ಬದುಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ಧಾರ್ಮಿಕ ಕಾರ್ಯಗಳನ್ನು ಆಚರಣೆ ಮಾಡುವ ಮೂಲಕ ಸತ್ ಸಂಪ್ರದಾಯಗಳನ್ನು ಹಾಕಿಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮದಲ್ಲಿ ಮುಕ್ತೇಶ್ವರ ಶಿಲಾ ದೇವಸ್ಥಾನವನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಸಮಾಜದ ಎಲ್ಲರೂ ಸೇರಿ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು ಎಂಬ ಕಾರಣಕ್ಕೆ ದೇವಸ್ಥಾನಗಳ ನಿರ್ಮಾಣ ಮಾಡಿದ್ದಾರೆ. ಹತ್ತಾರು ಜನ ಎಳೆಯಬಹುದಾದಂತಹ ತೆರುಗಳನ್ನು ನಿರ್ಮಾಣ ಮಾಡದೇ ನೂರಾರು ಜನತೆ ಸೇರಿ ಎಳೆಯುವಂತಹ ತೇರುಗಳನ್ನು ಮಾಡುವ ಮೂಲಕ ಎಲ್ಲ ಧರ್ಮಿಯರು ಸೇರಿ ಧರ್ಮಾಚರಣೆಗಳನ್ನು ಮಾಡಲಿ ಉದ್ದೇಶ ಅವರದಾಗಿತ್ತು ಈ ಮೂಲಕವಾದರೂ ನಾನು ಎನ್ನುವ ಅಹಂನ್ನು ಬಿಟ್ಡು ದೇವರಿಗೆ ತಲೆ ಬಾಗಬೇಕು ಸದುದ್ದೇಶ ಅವರದಾಗಿತ್ತು ಎಂದರು.
ಎಷ್ಟೇ ದೊಡ್ಡ ಸ್ಥಾನ ಬಂದರೂ ತಮ್ಮ ಮೂಲ ಬೇರನ್ನು ಮರೆತಿಲ್ಲ ಎನ್ನುವುದಕ್ಕೆ ಶಾಸಕ ನೆಹರು ಓಲೆಕಾರ್ ಅವರ ಹುಟ್ಟೂರು ಶಿಡೇನೂರನ್ನು ಮರೆತಿಲ್ಲ ಎನ್ನುವುದನ್ನು ಅವರು ಸಾಬೀತು ಮಾಡಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಅವರು ಕೃಷಿಕರಾಗಿ, ಸಾರ್ವಜನಿಕ ಸಂಘ ಸಂಸ್ಥೆಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಬಳಿಕ ಶಾಸಕರಾಗಿ ಈ ಭಾಗದ ಸೇವೆ ಮಾಡುತ್ತಿದ್ದಾರೆ. ತಮ್ಮ ಹುಟ್ಟೂರಿನಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಮಾಡುವ ಮೂಲಕ ಈ ಊರಿನ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಕ್ತೇಶ್ವರ ಈ ಭಾಗದ ಅತ್ಯಂತ ಪ್ರಮುಖವಾಗಿರುವ ಆರಾಧ್ಯ ದೈವ. ಈ ದೇವಸ್ಥಾನಕ್ಕೆ ತನ್ನದೇಯಾದ ಇತಿಹಾಸವಿದ್ದು, ಇದು ಮುಂದಿನ ದಿನಗಳಲ್ಲಿ ಪ್ರಸಿದ್ದಿ ಪಡೆಯಲಿದೆ ಎಂದು ಹೇಳಿದರು.
ಸಾಮೂಹಿಕವಾಗಿ ಎಲ್ಲರೂ ಶುದ್ದವಾಗಿ, ಪರಿಶುದ್ದವಾಗಿರಬೇಕು ಎನ್ನುವ ಕಾರಣಕ್ಕೆ ದೇವಸ್ಥಾನಗಳನ್ನು ನಿರ್ಮಾಣ ಮಾಡಲಾಗುತ್ತದೆ. ದೇವಸ್ಥಾನಕ್ಕೆ ಹೋದರೆ ಮನಸು ಶಾಂತವಾಗಿರುತ್ತದೆ. ದೇವಸ್ಥಾನದ ದ್ವಾರ ಬಾಗಿಲು ದೊಡ್ಡದಾಗಿರುತ್ತದೆ. ಅದು ಎಲ್ಲರನ್ನು ಸ್ವಾಗತಿಸುತ್ತದೆ. ಆದರೆ ದೇವಸ್ಥಾನದ ಗರ್ಭಗುಡಿ ಚಿಕ್ಕದಿರುತ್ತದೆ. ಅಲ್ಲಿ ನಾನು ಎನ್ನುವ ಅಹಂನ್ನು ಬಿಟ್ಟು ದೇವರಿಗೆ ತಲೆ ಬಾಗಬೇಕು ಎನ್ನುವ ಕಾರಣಕ್ಕೆ ನಮ್ಮ ಹಿರಿಯರು ಈ ರೀತಿಯ ಬಾಗಿಲುಗಳ ನಿರ್ಮಾಣ ಮಾಡಿದ್ದಾರೆ ಎಂದರು.
ಪ್ರತಿ ಕ್ಷಣವೂ ನಮ್ಮಲ್ಲಿ ನಾನು ಎನ್ನುವ ಭಾವನೆ ಇರುತ್ತದೆ. ನಾನು ಎನ್ನುವುದನ್ನು ಮರೆತರೆ, ಆ ಕ್ಷಣ ಭಕ್ತಿಭಾವದಿಂದ ಕೂಡುತ್ತದೆ. ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ, ದೇವರ ಬಳಿ ಧನಕನಕಗಳನ್ನು ಬೇಡಿಕೊಳ್ಳುವುದು ವ್ಯವಹಾರವಾಗುತ್ತದೆ. ಭಕ್ತಿಯಿಂದ ದೇವರ ಬಳಿ ಬೇಡಿಕೊಂಡಾಗ ದೇವರು ವರ ನೀಡುತ್ತಾನೆ. ದೇವರು ಕೇಳಿದ್ದಲ್ಲವನ್ನು ಕೊಡುವುದಿಲ್ಲ. ಭಕ್ತಿಯ ಸಮರ್ಪಣೆಯಾದರೆ, ದೇವರು ಬೇಡಿಕೊಳ್ಳದಿದ್ದರೂ ನೀಡುತ್ತಾನೆ. ನೆಹರು ಓಲೆಕಾರ ಅವರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಮುಕ್ತೇಶ್ವರ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.
ಈ ಸಂದರ್ಭದಲ್ಲಿ ಶಾಸಕ ನೆಹರು ಓಲೆಕಾರ, ಹುಕ್ಕೇರಿಮಠದ ಸದಾಶಿವ ಸ್ವಾಮಿಜೀ, ಮಹೇಶ ತೆಂಗಿನಕಾಯಿ, ಸಿದ್ದರಾಜ ಕಲಕೋಟಿ, ಪವನ ದೇಸಾಯಿ, ಭಾರತಿ ಜಂಬಗಿ, ಲಿಂಗಯ್ಯ ಹಿರೇಮಠ, ನಾಗೇಂದ್ರ ಕಟಕೋಳ, ಇತರರಿದ್ದರು. ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!