ಪ್ರತಾಪ್ ಸಿಂಹ ಹಾಕಿಕೊಟ್ಟ ಬುನಾದಿಯನ್ನು ನಾನು ಮುಂದುವರಿಸುತ್ತೇನೆ: ಯದುವೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರತಾಪ್ ಸಿಂಹ ಅವರು ಹಾಕಿಕೊಟ್ಟಿರುವ ಬುನಾದಿಯನ್ನು ನಾನು ಮುಂದುವರಿಸುತ್ತೇನೆ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಲೋಕಸಭಾ ಚುನಾವಣೆಗೆ ಟಿಕೆಟ್ ಸಿಕ್ಕ ಬಳಿಕ ಮೊದಲ ಬಾರಿಗೆ ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಗೆ ಯದುವೀರ್ ಭೇಟಿ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ತುಂಬಾ ಸಂತೋಷ ಇದೆ. ಕಳೆದ ಒಂದು ವರ್ಷದಿಂದ ರಾಜಕೀಯ ಚರ್ಚೆ ನಡೆಯುತ್ತಾ ಇತ್ತು. ಈಗ ಅದರ ಅವಕಾಶ ಸಿಕ್ಕಿದೆ. ಇಲ್ಲಿ ರಾಜ, ಸಾಮಾನ್ಯ ಜನ ಅನ್ನೋದಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಇಲ್ಲಿ ಎಲ್ಲರೂ ಒಂದೇ ಎಂದು ಅಭಿಪ್ರಾಯಪಟ್ಟರು.

ನನಗೆ ಟಿಕೆಟ್ ಸಿಕ್ಕಿರುವುದಕ್ಕೆ ಪ್ರತಾಪ್ ಸಿಂಹ ಅವರ ವಿರೋಧ ಇಲ್ಲ. ಅವರು ಹತ್ತು ವರ್ಷದಿಂದ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟಿರೋ ಬುನಾದಿಯನ್ನು ನಾನು ಮುಂದುವರಿಸುತ್ತೇನೆ. ಪ್ರತಾಪ್ ಸಿಂಹ ಅವರ ಸಹಕಾರ ಇದ್ದೇ ಇದೆ. ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೀನಿ. ನಿನ್ನೆಯೂ ಮಾತನಾಡಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀನಿ ಎಂದರು.

9 ವರ್ಷಗಳ ಕಾಲ ಅರಮನೆಯ ಜವಾಬ್ದಾರಿ ಹೊತ್ತು ಜನರ ಜೊತೆ ಬೆರೆತಿದ್ದೇನೆ. ಸಹೋದರನಂತೆ ನನ್ನನ್ನು ಪ್ರೀತಿಸಿದ್ದಾರೆ. ಅವರ ಋಣ ತೀರಿಸುವ ಸಮಯ ಬಂದಿದೆ. ರಾಜಕೀಯದ ಬಗ್ಗೆ ಒಂದು ವರ್ಷದಿಂದ ಮನಸು ಮಾಡಿದ್ದೆ. ಸಾರ್ವಜನಿಕರ ಸೇವೆಗೆ ಅವಕಾಶ ಇದು. ಅಧಿಕಾರ ಇದ್ದರೆ ಅಭಿವೃದ್ಧಿ ಮಾಡಬಹುದು. ಪ್ರತಾಪ್ ನನ್ನ ಜೊತೆ ಮಾತಾನಾಡುವಾಗ, ಬೆಂಬಲವಾಗಿ ನಿಲ್ಲುತ್ತೇನೆ ಅಂತಾ ಹೇಳಿದ್ದಾರೆ. ಅದನ್ನೇ ಸಂದೇಶ ಅಂದುಕೊಳ್ಳುವೆ ಎಂದರಲ್ಲದೇ, ಪ್ರತಾಪ್ ಬೆಂಬಲಿಗರ ಪ್ರತಿಭಟನೆ ಒಳ ಏಟು ಕೊಡಬಹುದಾ ಎನ್ನುವ ಪ್ರಶ್ನೆಗೆ ಇಲ್ಲ ಎಂದರು. ಎಲ್ಲರೂ ನನ್ನನ್ನು ಸಹೋದರ, ಮಗನಂತೆ ಕಂಡಿದ್ದಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!