ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ; ಮಾಜಿ ಸಚಿವ ಎಸ್.ಎ.ರಾಮದಾಸ್

ಹೊಸದಿಗಂತ ವರದಿ,ಮೈಸೂರು:

ಬರುವ ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿಯ ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.

ಭಾನುವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ನನಗೆ ಇದೆ. ಹಾಗಾಗಿ ನಾನು ಸ್ಪರ್ಧಿಸಬೇಕೆಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದವು. ಆದರೆ ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂದು ತೀರ್ಮಾನಿಸಿ, ಅದನ್ನು ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ನಾನು ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಲ್ಲ, ಅಭ್ಯರ್ಥಿಯಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಜಿಲ್ಲೆಗಳು ಸೇರಿದಂತೆ ಇಡೀ ದೇಶಾದ್ಯಂತ ಒಂದೊoದು ಕ್ಲಸ್ಟರ್ ಗಳನ್ನು ರಚಿಸಲಾಗಿದೆ. ಹಾಗೆಯೇ ಮೈಸೂರು ಕ್ಲಸ್ಟರ್ ನಲ್ಲಿ ಮೈಸೂರು,ಚಾಮರಾಜನಗರ,ಮಂಡ್ಯ ಹಾಸನವನ್ನು ಸೇರಿಸಿ ಒಂದು ಕ್ಲಸ್ಟರ್ ಮಾಡಲಾಗಿದ್ದು, ಆ ಕ್ಲಸ್ಟರ್ ಅಧ್ಯಕ್ಷ ಸ್ಥಾನವನ್ನು ನನಗೆ ನೀಡಲಾಗಿದೆ ಎಂದು ತಿಳಿಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಲಸ್ಟರ್ ನಲ್ಲಿ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲಿದೆ,ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಈ ಕಾರ್ಯದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದ್ದೇವೆ ಎಂದು ಹೇಳಿದರು.

ಮೈಸೂರು ಕ್ಲಸ್ಟರ್ ನಲ್ಲಿ ಬಿಜೆಪಿಯಾಗಲಿ ಅಥವಾ ಜೆಡಿಎಸ್ ಅಭ್ಯರ್ಥಿಯೇ ಆಗಲಿ ಯಾರನ್ನೇ ಸ್ಪರ್ಧೆ ಇಳಿಸಿದರೂ ನಮ್ಮ ಪಕ್ಷಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ದೇಶದ ಮೇಲಿನ ಆಕ್ರಮಣವನ್ನು ತಪ್ಪಿಸಲು ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕು. ಭಾರತ ದೇಶವು ವಿಶ್ವಗುರುವಾಗುವತ್ತ ಸಾಗಿದೆ. ನೆರೆಯ ಚೀನಾ ಸೇರಿದಂತೆ ಕೆಲ ದೇಶಗಳು ಭಾರತದ ಮೇಲೆ ದಾಳಿ ಮಾಡಲು ಸನ್ನದ್ಧವಾಗಿದೆ, ಮೋದಿ ಅವರನ್ನು ಈ ಬಾರಿ ಗೆಲ್ಲಿಸದಿದ್ದರೆ ದೇಶಕ್ಕೆ ಅಪಾಯವಿದೆ. ಹಾಗಾಗಿ ದೇಶದ ಜನತೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ೪೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಮೋದಿ ಕೈಯನ್ನು ಬಲಪಡಿಸಬೇಕು ಎಂದು ಹೇಳಿದರು.

ಜನವರಿ ೨೬ರಂದು ನವದೆಹಲಿಯಲ್ಲಿ ನಡೆಯುವ ರಿಪಬ್ಲಿಕ್ ಡೇ ಕಾರ್ಯಕ್ರಮಕ್ಕೆ ನಮ್ಮ ರಾಜ್ಯದಿಂದ ೧೪ ಮಂದಿ ಆಹ್ವಾನಿತರಾಗಿದ್ದಾರೆ, ಈ ಪೈಕಿ ನಾಲ್ಕು ಮಂದಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಹಾಗೂ೧೦ ಮಂದಿ ವಿಶ್ವಕರ್ಮ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳು ಎಂದು ತಿಳಿಸಿದರು.

ಸೋಮವಾರ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಕಚೇರಿ ಬಳಿ ಇರುವ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!