ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣವರ್ಗಾವಣೆ ಪ್ರಕರಣದಡಿ ಸದ್ಯ ಜೈಲಿನಲ್ಲಿರುವ ಸುಕೇಶ್ ಜೈನ್ ಈಗ ಮತ್ತೊಮ್ಮೆ ಪತ್ರ ಬರೆದಿದ್ದು ಆಪ್ ಮುಖಂಡರಾದ ಸತ್ಯೇಂದ್ರ ಜೈನ್ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮುಖವಾಡಗಳನ್ನು ಬಯಲು ಮಾಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.
MCD ಚುನಾವಣೆಗಳು ಮತ್ತು ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿರುವ ಸುಕೇಶ್ “ಇದು ನಿಮ್ಮ ರಾಜಕೀಯದ ಅಂತ್ಯಕ್ಕೆ ಪ್ರಾರಂಭವಾಗಿದೆ. ನಿಮ್ಮ ಎಲ್ಲಾ ನಿಜವಾದ ಬಣ್ಣಗಳು ಬಹಿರಂಗವಾಗಲಿವೆ. ಅವುಗಳು ಬಹಿರಂಗವಾದ ನಂತರ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ನಾನು ನಿಮ್ಮನ್ನು ಬಯಲಿಗೆಳೆಯುತ್ತೇನೆ” ಎಂದು ಉಲ್ಲೇಖಿಸಿದ್ದಾನೆ. ಈ ಪತ್ರಗಳನ್ನು ಬರೆಯುವಂತೆ ಯಾರೂ ಒತ್ತಡ ಹೇರಿಲ್ಲ, ಸ್ವಂತ ಇಚ್ಛೆಯ ಮೇರೆಗೆ ಬರೆದಿದ್ದೇನೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾನೆ.
ಕೇಜ್ರೀವಾಲ್ ವಿರುದ್ಧ ಪತ್ರಬರೆಯಲು ಬಿಜೆಪಿ ಒತ್ತಾಯಿಸಿದೆ ಎಂದು ಹೇಳಿ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆಯುವಂತೆ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರೀವಾಲ್ ನನಗೆ ಒತ್ತಡ ಹೇರಿದ್ದರು ಎಂದು ಸುಕೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಈ ಹಿಂದೆ ಬರೆದ ಪತ್ರಗಳಲ್ಲಿ ಏನೇನು ಹೇಳಲಾಗಿದೆಯೋ ಅದು ನಿಜ ಎಂದು ಪ್ರತಿಪಾದಿಸಿದ ಸುಕೇಶ್, “ಚುನಾವಣೆಯ ಮೊದಲು ಮತ್ತು ಈಗ ನೀಡಿರುವ ಎಲ್ಲಾ ಪತ್ರಗಳು ಮತ್ತು ಹೇಳಿಕೆಗಳು ನನ್ನ ಸ್ವಂತದ್ದು, ಯಾರ ಒತ್ತಡ ಅಥವಾ ಮಾರ್ಗದರ್ಶನದಲ್ಲಿ ಅಲ್ಲ, ಮತ್ತು ನೀಡಿರುವ ಎಲ್ಲಾ ಪತ್ರಗಳು ಮತ್ತು ಹೇಳಿಕೆಗಳು ನೀವು (ಕೇಜ್ರಿವಾಲ್) ಹೇಳಿದಂತೆ ಸಂಪೂರ್ಣ ನಕಲಿ ಅಲ್ಲ” ಎಂದು ಬರೆದಿದ್ದಾನೆ.
“ಎಎಪಿಯ ಆದೇಶದ ಮೇರೆಗೆ ಜೈಲಿನೊಳಗೆ ಬೆದರಿಕೆ ಹಾಕಲಾಗುತ್ತಿದೆ” ಎಂದು ಸುಕೇಶ್ ಪುನರುಚ್ಚರಿಸಿದ್ದಾನೆ.