ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಎಎಸ್ ಅಧಿಕಾರಿ ಪತ್ನಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಾಥಮಿಕ ತನಿಖೆಯನ್ನು ತಪ್ಪಾಗಿ ನಿರ್ವಹಿಸಿದ ಮೂವರು ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋಲ್ಕತ್ತಾ ಹೈಕೋರ್ಟ್ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ನೇತೃತ್ವದ ನ್ಯಾಯಪೀಠ , ಕಾನೂನಿಗೆ ವಿರುದ್ಧವಾಗಿ ಪುರುಷ ಅಧಿಕಾರಿಯೊಬ್ಬರಿಗೆ ಪ್ರಕರಣ ಹೊಣೆ ನೀಡಲಾಗಿದ್ದು, ಈ ವೇಳೆ ಗಂಭೀರ ಆರೋಪಗಳನ್ನು ಸಣ್ಣ ಆರೋಪಗಳಾಗಿ ಪರಿವರ್ತಿಸಲಾಗಿತ್ತು. ಇದು ಕೆಳ ನ್ಯಾಯಾಲಯದಿಂದ ಆರೋಪಿಯ ಜಾಮೀನಿಗೆ ದಾರಿ ಮಾಡಿಕೊಟ್ಟಿತು. ಆದರೆ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿದ್ದು, ಆರೋಪಿಯ ಜಾಮೀನು ತಿರಸ್ಕರಿಸಿದೆ. ಅಲ್ಲದೇ ತನಿಖೆಯನ್ನು ಡೆಪ್ಯೂಟಿ ಕಮಿಷನರ್ ಮಟ್ಟದ ಅಧಿಕಾರಿಗೆ ವರ್ಗಾಯಿಸುವಂತೆ ನ್ಯಾಯಾಲಯ ಆದೇಶಿಸಿದೆ.
ಜುಲೈ 14 ಮತ್ತು 15 ರಂದು ಈ ಘಟನೆ ನಡೆದಿದ್ದು, ಆರೋಪಿ ರಾತ್ರಿ 11:30ರ ಸುಮಾರಿಗೆ ಮನೆಗೆ ನುಗ್ಗಿ ಬಂದೂಕು ತೋರಿಸಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಕಾಯಿಸಿದ್ದರು. ಅಪರಾಧ ಗಂಭೀರ ಸ್ವರೂಪದ್ದಾದರೂ ಆರೋಪಿಗಳ ವಿರುದ್ಧ ಸಣ್ಣ ಆರೋಪ ಹೊರಿಸಲಾಗಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಅತ್ಯಾಚಾರ ಆರೋಪಿಯ ಪತ್ನಿ ಮತ್ತು ಆಕೆಯ ಮಗ ತನ್ನ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದರು. ಅಲ್ಲದೇ ಆರೋಪಿಗಳು ತನ್ನ ಮನೆಗೆ ನುಗ್ಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಗಣಿಸಲು ಪೊಲೀಸರು ನಿರಾಕರಿಸಿದರು ಎಂದು ಸಂತ್ರಸ್ತೆ ಹೇಳಿದ್ದಾರೆ.
ಇದರಿಂದ ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಲೈಂಗಿಕ ದೌರ್ಜನ್ಯದ ಆರೋಪದ ಗಂಭೀರತೆಯನ್ನು ಹಾಳು ಮಾಡಿದೆ ಎಂದಿರುವ ಕೋರ್ಟ್, ಪ್ರಕರಣದ ತನಿಖೆಯನ್ನು ನಡೆಸುವಂತೆ ಆದೇಶಿಸಿದೆ. ಅಲ್ಲದೇ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಮೂರು ದಿನಗಳೊಳಗೆ ಎಲ್ಲಾ ದಾಖಲೆಗಳು ಮತ್ತು ಕೇಸ್ ಡೈರಿಯನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸುವಂತೆ ಹಾಲಿ ತನಿಖಾಧಿಕಾರಿಗೆ ಹೈಕೋರ್ಟ್ ಸೂಚಿಸಿದೆ.