ಕ್ರಿಕೆಟ್‌ ನಿಯಮಗಳಲ್ಲಿ ದೊಡ್ಡ ಬದಲಾವಣೆ ತಂದ ಐಸಿಸಿ: ಇನ್ಮೇಲೆ ಮಂಕಡಿಂಗ್ ಔಟ್‌ ಮಾನ್ಯ! ಉಳಿದ ಬದಲಾವಣೆ ಗಮನಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಮಂಗಳವಾರ ಕ್ರಿಕೆಟ್‌ ನಿಯಮಾವಳಿಗಳಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದು ಅದು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಅತ್ಯಂತ ಮಹತ್ವದ ಬದಲಾವಣೆಗಳಲ್ಲಿ ಕ್ರಿಕೆಟ್ ಚೆಂಡನ್ನು ಹೊಳಪು ಮಾಡಲು ಲಾಲಾರಸ (ಎಂಜಲು) ಬಳಕೆಯ ಮೇಲೆ ಶಾಶ್ವತ ನಿಷೇಧ ಹೇರಲಾಗಿದೆ, ಜೊತೆಗೆ ಇನ್ನು ಮುಂದೆ ‘ಮಂಕಾಡಿಂಗ್’ ಅನ್ನು ಮಾನ್ಯ ಮಾಡಲಾಗಿದ್ದು, ಅದನ್ನು ಮಂಕಡಿಂಗ್‌ ಅನ್ನು ರನ್ ಔಟ್ ಎಂದು ಪರಿಗಣಿಸಲಾಗುತ್ತದೆ. ಇದರ ಅನ್ವಯ ಬ್ಯಾಟ್ಸ್‌ ಮನ್‌ ಬೌಲರ್‌ ಎಂಡ್‌ ನಲ್ಲಿ ಬಾಲ್‌ ಎಸೆಯುವುದಕ್ಕಿಂತ ಮುನ್ನ ಕ್ರೀಸ್‌ ಬಿಟ್ಟು ಬೌಲರ್‌ ಔಟ್‌ ಮಾಡಿದರೆ ಅದನ್ನು ನಿಯಮಬದ್ಧವಾಗಿ ʼರನ್ ಔಟ್ʼ ಎಂದು ಪರಿಗಣಿಸಲಾಗುತ್ತದೆ.
ಭಾರತದ ಮಾಜಿ ನಾಯಕ ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಮಾಡಿದ ಶಿಫಾರಸುಗಳನ್ನು ಮುಖ್ಯ ಕಾರ್ಯನಿರ್ವಾಹಕರ ಸಮಿತಿ (ಸಿಇಸಿ) ಅನುಮೋದಿಸಿದೆ.
ಜನವರಿ 2022 ರಲ್ಲಿ T20I ಗಳಲ್ಲಿ ಪರಿಚಯಿಸಲಾದ ಪಂದ್ಯದ ಮೇಲಿನ ಪೆನಾಲ್ಟಿ, ( ನಿಗದಿತ ವಿರಾಮದ ಸಮಯದಲ್ಲಿ ಫೀಲ್ಡಿಂಗ್ ತಂಡವು ನಿಗದಿಪಡಿಸಿದ ಓವರ್‌ಗಳನ್ನು ಬೌಲ್ ಮಾಡಲು ವಿಫಲವಾದರೆ, ಇನ್ನಿಂಗ್ಸ್‌ನ 17 ನೇ ಓವರ್‌ ನಂತರ ಹೆಚ್ಚುವರಿ ಫೀಲ್ಡರ್ ಅನ್ನು ಫೀಲ್ಡಿಂಗ್ ವೃತ್ತದೊಳಗೆ ಕರೆತರಬೇಕಾಗುತ್ತದೆ) , 2023 ರಲ್ಲಿ ICC ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಪೂರ್ಣಗೊಂಡ ನಂತರ ಏಕದಿನ ಪಂದ್ಯಗಳಲ್ಲಿಯೂ ಅಳವಡಿಸಿಕೊಳ್ಳಲಾಗುವುದು.

ಬದಲಾದ ನಿಯಮಾವಳಿಗಳು ಇಲ್ಲಿವೆ:
ಕ್ಯಾಚ್ ಔಟ್ ಆದರೆ ನಂತರ ಬರುವ ಬ್ಯಾಟರ್ ಕ್ರೀಸ್​ಗೆ
ಬ್ಯಾಟರ್ ಕ್ಯಾಚ್ ಔಟ್ ಆಗಿದ್ದರೆ, ಕ್ಯಾಚ್ ತೆಗೆದುಕೊಳ್ಳುವ ಮೊದಲು ಬ್ಯಾಟರ್‌ಗಳು ಕ್ರೀಸ್ ಕ್ರಾಸ್ ಮಾಡಿದರೂ ‌ಹೊಸ ಬ್ಯಾಟ್ಸ್‌ ಮನ್ ಸ್ಟ್ರೈಕ್‌ ಗೆ ಬರುತ್ತಾನೆ. (ಓವರ್ ನಂತರದ ಬದಲಾವಣೆ ಹೊರತುಪಡಿಸಿ). ಈ ಮೊದಲು ಅರ್ಧ ಪಿಚ್ ಕ್ರಾಸ್ ಮಾಡಿದ್ದರೆ ಸ್ಟ್ರೈಕರ್ ಬದಲಾಗುತ್ತಿತ್ತು. ಹೊಸ ನಿಯಮದಲ್ಲಿ ಹಾಗಿಲ್ಲ.

ಸಲೈವಾ ಶಾಶ್ವತ ಬ್ಯಾನ್!
ಕೋವಿಡ್ ಸಂಬಂಧಿತ ತಾತ್ಕಾಲಿಕ ಕ್ರಮವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡು ವರ್ಷಗಳಿಂದ ಸಲೈವಾ ನಿಷೇಧ ಜಾರಿಯಲ್ಲಿತ್ತು. ಮತ್ತು ನಿಷೇಧವನ್ನು ಶಾಶ್ವತಗೊಳಿಸುವುದು ಸೂಕ್ತವೆಂದು ಪರಿಗಣಿಸಲಾಗಿದೆ.

ಹೊಸ ಬ್ಯಾಟ್ಸ್‌ ಮನ್‌ 2 ನಿಮಿಷಗಳಲ್ಲಿ ಚೆಂಡನ್ನು ಎದುರಿಸಲು ಸಿದ್ಧನಾಗಬೇಕು:
ಒಳಬರುವ ಬ್ಯಾಟರ್ ಈಗ ಟೆಸ್ಟ್ ಮತ್ತು ODIಗಳಲ್ಲಿ ಎರಡು ನಿಮಿಷಗಳಲ್ಲಿ ಸ್ಟ್ರೈಕ್ ತೆಗೆದುಕೊಳ್ಳಲು ಸಿದ್ಧನಾಗಬೇಕು. ಆದರೆ T20I ಪಂದ್ಯಗಳಲ್ಲಿ ತೊಂಬತ್ತು ಸೆಕೆಂಡುಗಳ ಮಿತಿಯನ್ನು ಉಳಿಸಲಾಗಿದೆ.

ಡೆಡ್‌ ಬಾಲ್‌ ಘೋಷಣೆ:
ಪಂದ್ಯ ನಡೆಯುವಾಗ ಎಸೆತ ಎಸೆಯುವ ವೇಳೆ ಮೂರನೇ ವ್ಯಕ್ತಿಯಿಂದ, ಪ್ರಾಣಿಯಿಂದ, ಅಥವಾ ವಸ್ತುಗಳಿಂದ ಅಡಚಣೆಯಾದರೆ ಅದನ್ನು ಡೆಡ್ ಬಾಲ್ ಎಂದು ಕರೆಯಲಾಗುತ್ತದೆ. ಬ್ಯಾಟ್ಸ್‌ ಮನ್‌ ಗೆ ಕ್ರಿಕೆಟ್‌ ನಿಯಮಾವಳಿಗಳಿಗೆ ಹೊರತಾಗಿ ಪಿಚ್‌ ನಲ್ಲಿ ಸಮಸ್ಯೆ ಉಂಟಾದಾಗ ಆ ಬಾಲ್‌ ಅನ್ನು ಅನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ.

ಫೀಲ್ಡರ್‌ ಗಳ ಅನಗತ್ಯ ಚಲನೆಗೆ ಪೆನಾಲ್ಟಿ:
ಬೌಲರ್ ಬೌಲಿಂಗ್ ಮಾಡಲು ಓಡುತ್ತಿರುವಾಗ ಫೀಲ್ಡರ್‌ ಗಳು ಉದ್ದೇಶಪೂರ್ವಕವಾಗಿ ಅಥವಾ ಅನಗತ್ಯವಾಗಿ ಬ್ಯಾಟ್ಸ್‌ ಮನ್‌ ಏಕಾಗ್ರತೆ ಭಗ್ನಗೊಳಿಸಲು ಚಲಿಸಿದರೆ ಅದನ್ನು ಡೆಡ್ ಬಾಲ್‌ ಎಂದು ಘೋಷಿಸಬಹುದು. ಒತೆಗೆ ಅಂಪೈರ್ ಬ್ಯಾಟಿಂಗ್ ತಂಡಕ್ಕೆ ಐದು ಪೆನಾಲ್ಟಿ ರನ್‌ಗಳನ್ನು ನೀಡಬಹುದು.

 ನಾನ್ ಸ್ಟ್ರೈಕರ್ ರನ್ ಔಟ್ (ಮಂಕಾಡಿಂಗ್)

ಈ ಮಾದರಿಯ ಔಟ್ ಮಂಕಾಡಿಂಗ್ ಎಂದು ಪ್ರಸಿದ್ಧವಾಗಿದೆ. ನಾನ್ ಸ್ಟ್ರೈಕರ್​ನಲ್ಲಿದ್ದ ಆಟಗಾರ ಎಸೆತ ಎಸೆಯುವ ಮುನ್ನ ಕ್ರೀಸ್ ಬಿಟ್ಟರೆ ಅವನನ್ನು ಔಟ್ ಮಾಡುವ ಅವಕಾಶವನ್ನು ನೀಡಲಾಗಿದೆ. ಮೊದಲು ಇದನ್ನು ಕ್ರೀಡಾ ಸ್ಫೂರ್ತಿಗೆ ವಿರುದ್ಧ ಎಂದು ಹೇಳಲಾಗುತ್ತಿತ್ತು. ಇದೀಗ ಇದನ್ನು ರನ್ ಔಟ್ ಎಂದು ಮಾನ್ಯ ಮಾಡಲಾಗಿದೆ. ಇನ್ನು ಮುಂದೆ ಬ್ಯಾಟ್ಸ್‌ ಮನ್‌ ಕ್ರೀಸ್‌ ಬಿಟ್ಟರೆ ಔಟ್‌ ಮಾಡಬಹುದು!.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!