ICC ನೂತನ ಟಿ20 ರ್‍ಯಾಂಕಿಂಗ್‌: ಆಲ್ರೌಂಡರ್ ನಲ್ಲಿ ಪಾಂಡ್ಯ ಟಾಪ್, ತಿಲಕ್ ಗೂ ಒಲಿದ ಅದೃಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ICC ನೂತನ ಟಿ20 ರ್‍ಯಾಂಕಿಂಗ್‌ ಪ್ರಕಟಿಸಿದ್ದು, ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಟಿ20 ಸರಣಿ ಗೆದ್ದ ಭಾರತ ತಂಡದ ಆಟಗಾರರ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಅನುಭವಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಐಸಿಸಿ ಟಿ20 ಆಲ್ರೌಂಡರ್ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಹರಿಣಗಳ ನಾಡಿನಲ್ಲಿ ಸತತ ಎರಡು ಶತಕ ಸಿಡಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಜಯಿಸಿದ್ದ ತಿಲಕ್ ವರ್ಮಾ ಲಾಂಗ್ ಜಂಪ್ ಮಾಡಿದ್ದು, ಟಾಪ್ 10 ಬ್ಯಾಟರ್‌ಗಳ ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಸರಣಿಗೂ ಮುನ್ನ ಹಾರ್ದಿಕ್ ಪಾಂಡ್ಯ, ಐಸಿಸಿ ಟಿ20 ಆಲ್ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಹರಿಣಗಳ ನಾಡಿನಲ್ಲಿ ನಡೆದ 4 ಪಂದ್ಯಗಳ ಟಿ20 ಸರಣಿಯಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಿದ್ದರು. ಈ ಮೂಲಕ ಪಾಂಡ್ಯ 244 ರೇಟಿಂಗ್‌ ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಇನ್ನು ನೇಪಾಳದ ದಿಪೇಂದ್ರ ಸಿಂಗ್ ಐರ್ರೆ ಎರಡನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಆದರೆ ಅಗ್ರಸ್ಥಾನದಲ್ಲಿದ್ದ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಎರಡು ಸ್ಥಾನ ಕುಸಿತ ಕಂಡು 230 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಾರಿದ್ದಾರೆ.

ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಎರಡು ಶತಕ ಸಹಿತ 280 ರನ್ ಬಾರಿಸಿ ಮಿಂಚಿದ್ದ ತಿಲಕ್ ವರ್ಮಾ, ಇದೇ ಮೊದಲ ಬಾರಿಗೆ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಿಲಕ್ ವರ್ಮಾ ಇದೀಗ ಟಿ20 ಶ್ರೇಯಾಂಕದಲ್ಲಿ ಬರೋಬ್ಬರಿ 69 ಸ್ಥಾನ ಜಿಗಿತ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ 855 ರೇಟಿಂಗ್ ಅಂಕಗಳೊಂದಿಗೆ ಆಸ್ಟ್ರೇಲಿಯಾ ಟ್ರ್ಯಾವಿಸ್ ಹೆಡ್ ಮೊದಲ ಸ್ಥಾನದಲ್ಲಿದ್ದರೇ, 828 ರೇಟಿಂಗ್ ಅಂಕಗಳೊಂದಿಗೆ ಇಂಗ್ಲೆಂಡ್‌ನ ಫಿಲ್ ಸಾಲ್ಟ್‌ ಎರಡನೇ ಸ್ಥಾನದಲ್ಲಿದ್ದಾರೆ. ಇಸೂರ್ಯಕುಮಾರ್ ಯಾದವ್ ಸದ್ಯ ಒಂದು ಸ್ಥಾನ ಕುಸಿತ ಕಂಡು 4ನೇ ಸ್ಥಾನಕ್ಕೆ ಜಾರಿದ್ದರೇ, ಯಶಸ್ವಿ ಜೈಸ್ವಾಲ್ ಕೂಡಾ ಒಂದು ಸ್ಥಾನ ಕುಸಿದು 8ನೇ ಸ್ಥಾನದಲ್ಲಿದ್ದಾರೆ.

ಇನ್ನು ಟಿ20 ಬೌಲರ್‌ ರ್‍ಯಾಂಕಿಂಗ್‌ನಲ್ಲಿ ಮೊದಲೆರಡು ಸ್ಥಾನಗಳಲ್ಲಿ ಕ್ರಮವಾಗಿ ಇಂಗ್ಲೆಂಡ್‌ನ ಆದಿಲ್ ರಶೀದ್ ಹಾಗೂ ಶ್ರೀಲಂಕಾದ ವನಿಂದು ಹಸರಂಗ ಮುಂದುವರೆದಿದ್ದಾರೆ. ಇನ್ನು ಇನ್ನು ಆಸ್ಟ್ರೇಲಿಯಾದ ಆಡಂ ಜಂಪಾ 5 ಸ್ಥಾನ ಜಿಗಿತ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಭಾರತದ ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಎಡಗೈ ವೇಗಿ ಆರ್ಶದೀಪ್ ಸಿಂಗ್ ಕ್ರಮವಾಗಿ 8 ಹಾಗೂ 9ನೇ ಸ್ಥಾನ ಪಡೆದಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!