ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಏಕದಿನ(ICC ODI Rankings) ಬ್ಯಾಟಿಂಗ್ ಮತ್ತು ಬೌಲಿಂಗ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾ ಆಟಗಾರರು ಪಾರುಪತ್ಯ ಮೆರೆದಿದ್ದಾರೆ.
ಶುಭಮನ್ ಗಿಲ್(Shubman Gill) ಅವರು ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ(Virat Kohli) ಮತ್ತು ರೋಹಿತ್ ಶರ್ಮ(Rohit Sharma) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರು ತವರಿನಲ್ಲಿ ನಡೆದ ವಿಶ್ವಕಪ್ ಅಭಿಯಾನದಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿ ಒಟ್ಟು 11 ಪಂದ್ಯಗಳನ್ನು ಆಡಿ 765 ರನ್ ಬಾರಿಸಿದ್ದರು. ಜತೆಗೆ ಟೂರ್ನಿಯಲ್ಲಿ ಅತ್ಯಧಿಕ ಮೊತ್ತ ಬಾರಿಸಿದ ಆಟಗಾರ ಎನಿಸಿಕೊಂಡಿದ್ದರು. ಅವರ ಬ್ಯಾಟಿಂಗ್ ಸಾಧನೆಯಿಂದಾಗಿ ಶ್ರೇಯಾಂಕದಲ್ಲಿ ಪ್ರಗತಿ ಕಂಡಿದೆ. ಸದ್ಯ 791 ರೇಟಿಂಗ್ ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ .
ಬಾಬರ್ ಅಜಂ ಅವರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಶುಭಮನ್ ಗಿಲ್ ಅವರ ಈ ಸ್ಥಾನ ಸದ್ಯಕ್ಕೆ ಭದ್ರವಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ರೇಟಿಂಗ್ ಅಂಕದಲ್ಲಿ ಕುಸಿತ ಕಂಡಿದ್ದಾರೆ. ಇದಕ್ಕೆ ಕಾರಣ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅವರು ಅನುಭವಿಸಿದ ಬ್ಯಾಟಿಂಗ್ ವೈಫಲ್ಯ. ಫೈನಲ್ನಲ್ಲಿ ಗಿಲ್ ಕವಲ 4 ರನ್ ಗಳಿಸಿದ್ದರು. ಪಾಕ್ ಮಾಜಿ ನಾಯಕ ಬಾಬರ್ ಅಜಂ(824 ರೇಟಿಂಗ್ ಅಂಕ) ದ್ವಿತೀಯ ಸ್ಥಾನದಲ್ಲೇ ಮುಂದುವರಿದ್ದಾರೆ.
ರೋಹಿತ್ ಶರ್ಮ ಕೂಡ ನೂತನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದು ಮೂರನೇ ಸ್ಥಾನ ಪಡೆದಿದ್ದಾರೆ. ಸದ್ಯ ಅವರ ರೇಟಿಂಗ್ ಅಂಕ 769. ಕಳೆದ ವಾರ ರೋಹಿತ್ ಅವರು 760 ರೇಟಿಂಗ್ ಅಂಕದೊಂದಿಗೆ 5ನೇ ಸ್ಥಾನದಲ್ಲಿದ್ದರು. ವಿರಾಟ್ ಕೊಹ್ಲಿ ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದರು. ಈಗ ಮೂರಕ್ಕೇರಿದ್ದಾರೆ.
ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿದ್ದ ಮೊಹಮ್ಮದ್ ಸಿರಾಜ್ ಅವರು ಕಳೆದ ವಾರ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನೂತನ ಪಟ್ಟಿಯಲ್ಲಿ ಮತ್ತೆ ಒಂದು ಸ್ಥಾನದ ಕುಸಿತ ಕಂಡು ಮೂರಕ್ಕೆ ಜಾರಿದ್ದಾರೆ. ಸದ್ಯ ಅವರ ರೇಟಿಂಗ್ ಅಂಕ 699. ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್ವುಡ್(703 ರೇಟಿಂಗ್ ಅಂಕ) ಈಗ 2ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 741 ರೇಟಿಂಗ್ ಅಂಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ವಿಶ್ವಕಪ್ ಟೂರ್ನಿಯಲ್ಲಿ 24 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಅವರು 10ನೇ ಸ್ಥಾನ ಪಡದಿದ್ದಾರೆ. ಜಸ್ಪ್ರೀತ್ ಬುಮ್ರಾ ನಾಲ್ಕನೇ, ಕುಲ್ದೀಪ್ ಯಾದವ್ ಅವರು ಅಘಾನಿಸ್ತಾನದ ರಶೀದ್ ಖಾನ್ ಅವರೊಂದಿಗೆ ಜಂಟಿ 6ನೇ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 10ನೇ ಸ್ಥಾನದಲ್ಲಿದ್ದಾರೆ.