September 16, 2026
Wednesday, September 16, 2026
spot_img

ಮೊದಲ ಟೆಸ್ಟ್ ಸೋಲಿನ ಬಳಿಕ ಪಾಕ್ ಗೆ ಶಾಕ್ ಕೊಟ್ಟ ಐಸಿಸಿ: ಅಂಕ ಕಡಿತದ ಜೊತೆಗೆ ಫೈನ್ ಕೂಡ ಬಿತ್ತಂತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಪಾಕಿಸ್ತಾನ ತಂಡಕ್ಕೆ ಇದೀಗ ಐಸಿಸಿಯಿಂದ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ.

ಪಂದ್ಯದಲ್ಲಿ ನಿಗದಿತ ಸಮಯಕ್ಕೆ ಓವರ್‌ಗಳನ್ನು ಪೂರ್ಣಗೊಳಿಸದ ಕಾರಣ ಪಾಕಿಸ್ತಾನದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳನ್ನು ಐಸಿಸಿ ಕಡಿತಗೊಳಿಸಿದೆ. ಇದರೊಂದಿಗೆ ತಂಡದ ಸ್ಥಿತಿ ಇನ್ನಷ್ಟು ಸಂಕಷ್ಟಕರವಾಗಿದೆ.

ಐಸಿಸಿ ನಿಯಮಗಳ ಪ್ರಕಾರ ಒಂದು ತಂಡ ಗಂಟೆಗೆ ಕನಿಷ್ಠ 15 ಓವರ್‌ಗಳನ್ನು ಬೌಲ್ ಮಾಡಬೇಕು. ಆದರೆ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಎಂಟು ಓವರ್‌ಗಳನ್ನು ಕಡಿಮೆ ಬೌಲ್ ಮಾಡಿತ್ತು. ಈ ಕಾರಣಕ್ಕೆ ತಂಡದ ಎಂಟು ಡಬ್ಲ್ಯೂಟಿಸಿ ಅಂಕಗಳನ್ನು ಕಡಿತಗೊಳಿಸಲಾಗಿದೆ. ಜೊತೆಗೆ ಆಟಗಾರರ ಪಂದ್ಯ ಶುಲ್ಕದ 40 ಶೇಕಡಾ ದಂಡವೂ ವಿಧಿಸಲಾಗಿದೆ.

ಇದನ್ನೂ ಓದಿ:

ಈ ಶಿಕ್ಷೆಯ ನಂತರ ಪಾಕಿಸ್ತಾನ ತಂಡದ ಡಬ್ಲ್ಯೂಟಿಸಿ ಅಂಕಗಳು ಕೇವಲ 4ಕ್ಕೆ ಇಳಿದಿವೆ. ಅಂಕಪಟ್ಟಿಯಲ್ಲಿ ತಂಡ ಈಗ ಏಳನೇ ಸ್ಥಾನದಲ್ಲಿದೆ. ಸರಣಿ ಗೆಲ್ಲುವ ಅವಕಾಶ ಈಗಾಗಲೇ ಕೈತಪ್ಪಿರುವ ಪಾಕ್ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಸಾಧಿಸುವ ಒತ್ತಡ ಹೆಚ್ಚಾಗಿದೆ.

ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ 104 ರನ್‌ಗಳ ಭರ್ಜರಿ ಜಯ ಸಾಧಿಸಿತ್ತು. ನಾಯಕ ನಜ್ಮುಲ್ ಹೊಸೈನ್ ಶಾಂಟೋ ಶತಕ ಹಾಗೂ ಅರ್ಧಶತಕ ಸಿಡಿಸಿ ಮಿಂಚಿದರೆ, ವೇಗಿ ನಹಿದ್ ರಾಣಾ ಐದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಎರಡನೇ ಟೆಸ್ಟ್ ಪಂದ್ಯ ಮೇ 16ರಂದು ಸಿಲ್ಹೆಟ್‌ನಲ್ಲಿ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !