ಆಸಿಸ್‌ ಸವಾಲು ಗೆದ್ದ ಭಾರತಕ್ಕೆ ಟಿ 20 ಯಲ್ಲಿ ಅಗ್ರಸ್ಥಾನ!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ 2-1 ಅಂತರದಲ್ಲಿ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ ಪುರುಷರ ತಂಡವು ಟಿ 20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.
ಈ ಸರಣಿ ಗೆಲುವಿನ ಮುಖೇನ ಭಾರತ ತಂಡವು ಒಟ್ಟಾರೆಯಾಗಿ 268 ಅಂಕಗಳನ್ನು ಪಡೆದಿದ್ದು, ಈ ಹಿಂದಿಗಿಂತ ಒಂದು ಸ್ಥಾನವನ್ನು ಹೆಚ್ಚುವರಿಯಾಗಿ ಪಡೆದಿದೆ. 261 ಅಂಕಗಳಿಸಿ ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್‌ ಭಾರತಕ್ಕಿಂತ ಏಳು ಅಂಕಗಳ ಹಿಂದಿದೆ.
ಹೈದರಾಬಾದ್‌ನಲ್ಲಿ ಭಾನುವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ 187 ರನ್‌ಗಳ ಬೃಹತ್ ಗುರಿಯನ್ನು ‌ನಿರಾಯಾಸವಾಗಿ ಬೆನ್ನಟ್ಟಿ ಆಸ್ಟ್ರೇಲಿಯಾ ವಿರುದ್ಧ 2-1 ಅಂತರದ ಸರಣಿಯನ್ನು ವಶಪಡಿಸಿಕೊಂಡಿದೆ. ಟಿ 20 ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾವು ಭಾರತದ ವಿರುದ್ಧದ ಸರಣಿಯ ಸೋಲಿನ ಬಳಿಕ 250 ಅಂಕಗಳಿಗೆ ಕುಸಿದಿದ್ದು, ಒಂದು ಅಂಕವನ್ನು ಕಳೆದುಕೊಂಡಿದೆ. ಟಿ 20 ಹಾಲಿ ಚಾಂಪಿಯನ್‌ ಆಸಿಸ್ ತವರಿನಲ್ಲಿ ನಡೆಯುವ ವಿಶ್ವಕಪ್‌ ಗೂ ಮುನ್ನ ವೆಸ್ಟ್ ಇಂಡೀಸ್, ಇಂಗ್ಲೆಂಡ್ ವಿರುದ್ಧ ಇನ್ನೂ ಒಟ್ಟಾರೆಯಾಗಿ ಆರು ಪಂದ್ಯಗಳನ್ನು ಆಡಲಿದ್ದು, ಗೆಲುವಿನ ಅಭ್ಯಾಸ ನಡೆಸಲು ಎದುರು ನೋಡುತ್ತಿದೆ.
ಮತ್ತೊಂದೆಡೆ, ಪಾಕಿಸ್ತಾನದ ವಿರುದ್ಧದ ನಾಲ್ಕನೇ ಟಿ 20 ಯಲ್ಲಿ ಇಂಗ್ಲೆಂಡ್ ನಿಕಟವಾದ ಸೋಲನ್ನು ಅನುಭವಿಸಿದೆ. ಕರಾಚಿಯಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮೂರು ರನ್‌ ಗಳಿಂದ ಸೋಲಿಗೆ ಶರಣಾಗಿದೆ.
ಪಾಕ್‌ ವಿರುದ್ದ ಉಳಿದಿರುವ ಪಂದ್ಯದಲ್ಲಿ ಕನಿಷ್ಠ ಪಕ್ಷ ಒಂದನ್ನಾದರೂ ಗೆದ್ದರೆ ಇಂಗ್ಲೆಂಡ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಳ್ಳಲಿದೆ. ಆದರೆ ಬುಧವಾರ ಪ್ರಾರಂಭವಾಗುವ ಮೂರು ಪಂದ್ಯಗಳ ಸರಣಿಯಲ್ಲಿ ಭಾರತವನ್ನು ಎದುರಿಸುತ್ತಿರುವ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನಕ್ಕೆ ಜಿಗಿಯಲು ಕಾತರಿಸುತ್ತಿದೆ.
ಪಾಕಿಸ್ತಾನವು ಪ್ರಸ್ತುತ 258 ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಜಂಠಿ ಮೂರನೇ ಸ್ಥಾನವನ್ನು ಹೊಂದಿದೆ. ಆದರೆ  ಇಂಗ್ಲೆಂಡ್ ವಿರುದ್ಧ ಉಳಿದ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಅದಕ್ಕೆ ಎರಡನೇ ಸ್ಥಾನಕ್ಕೇರುವ ಅವಕಾಶ ಇದೆ.
ನ್ಯೂಜಿಲೆಂಡ್ ಒಟ್ಟು 252 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿ ಉಳಿದಿದೆ. ಕೇನ್ ವಿಲಿಯಮ್ಸನ್ ಪಡೆ T20 ವಿಶ್ವಕಪ್‌ನ ಆರಂಭಕ್ಕೂ ಮೊದಲು ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳದೊಂದಿಗೆ ತನ್ನ ತವರು ನೆಲದಲ್ಲಿ ತ್ರಿಕೋನ ಸರಣಿಗೆ ಆತಿಥ್ಯ ವಹಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!