ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಆಟಗಾರರ Ranking ಪಟ್ಟಿಯನ್ನು ಪರಿಷ್ಕರಿಸಿದ್ದು, ರಿಷಬ್ ಪಂತ್ ಬ್ಯಾಟರ್ ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ್ದಾರೆ.
ಇಂದು ಐಸಿಸಿ ನೂತನ ಟೆಸ್ಟ್ Ranking ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಭರ್ಜರಿ ಮುಂಬಡ್ತಿ ಪಡೆದಿದ್ದು, ಆರನೇ ಸ್ಥಾನಕ್ಕೇರಿದ್ದಾರೆ.
ಯಶಸ್ವಿ ಜೈಸ್ವಾಲ್ 780 ರೇಟಿಂಗ್ ಪಾಯಿಂಟ್ಸ್ನೊಂದಿಗೆ 4ನೇ ಸ್ಥಾನದಲ್ಲಿ ಮುಂದುವರೆದಿದ್ದು, ಈ ಹಿಂದೆ 7ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ಇದೀಗ 720 ರೇಟಿಂಗ್ ಪಾಯಿಂಟ್ಸ್ಗಳೊಂದಿಗೆ 8ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಸರ್ಫರಾಜ್ ಖಾನ್ ಐಸಿಸಿ Ranking ಪಟ್ಟಿಯಲ್ಲಿ ಬರೊಬ್ಬರಿ 31 ಸ್ಥಾನ ಮೇಲೇರಿ 53ನೇ ಸ್ಥಾನಕ್ಕೆ ಬಂದಿದ್ದಾರೆ. ಈ ಹಿಂದೆ ಸರ್ಫರಾಜ್ 84ನೇ ಸ್ಥಾನದಲ್ಲಿದ್ದರು.
ಅಲ್ಲದೆ ಈ ಮೂಲಕ ಕನ್ನಡಿಗ ಕೆಎಲ್ ರಾಹುಲ್ರನ್ನು ಹಿಂದಿಕ್ಕಿದ್ದಾರೆ. ಪ್ರಸ್ತುತ 509 ರೇಟಿಂಗ್ ಪಾಯಿಂಟ್ಸ್ ಹೊಂದಿರುವ ಸರ್ಫರಾಜ್ ಖಾನ್, ರಾಹುಲ್ಗಿಂತ 6 ಸ್ಥಾನ ಮುಂಬಡ್ತಿ ಪಡೆದಿದ್ದಾರೆ. ಇತ್ತ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ರಾಹುಲ್ ಬರೋಬ್ಬರಿ 10 ಸ್ಥಾನಗಳನ್ನು ಕಳೆದುಕೊಂಡಿದ್ದು, ಇದೀಗ 59ನೇ ಸ್ಥಾನಕ್ಕೆ ಜಾರಿದ್ದಾರೆ.
ಉಳಿದಂತೆ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಇಂಗ್ಲೆಂಡ್‌ನ ಜೋ ರೂಟ್ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದ್ದು, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ 821 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಹ್ಯಾರಿ ಬ್ರೂಕ್ ಒಂದು ಸ್ಥಾನ ಜಾರಿದ್ದು, ಇದೀಗ 803 ರೇಟಿಂಗ್‌ನೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.