ರಾತ್ರಿ, ಹಗಲು ನೋಡದೇ ಕೆಲಸ ಮಾಡೋ ಈ ದಂಪತಿಗೆ ಪ್ರಾಣಿಗಳ ಪ್ರೀತಿಯೇ ಸಂಬಳ!

  • ಮೇಘನಾ ಶೆಟ್ಟಿ, ಶಿವಮೊಗ್ಗ

ಇವರಿಗೆ ಯಾವ ವಾರವೂ ಬಿಡುವಿಲ್ಲದಷ್ಟು ಕೆಲಸ, ಹಗಲು ರಾತ್ರಿ ಎನ್ನದೇ ಬರುವ ಫೋನ್ ಕಾಲ್ಸ್, ಯಾರು ಕರೆ ಮಾಡಿದರೂ ತಕ್ಷಣ ಇದ್ದಂತೆಯೇ ಹೊರಟು ಹೋಗ್ತಾರೆ ಈ ದಂಪತಿ. ಈ ರೀತಿ ಯಾರಾದರೂ ಕೆಲಸ ಮಾಡೋಕೆ ಸಾಧ್ಯಾನಾ? ಇಷ್ಟು ಕಿರಿಕಿರಿ ಇದ್ರೂ ಕೆಲಸ ಮಾಡ್ತಾರೆ ಅಂದ್ರೆ ಗ್ಯಾರೆಂಟಿ ಲಕ್ಷ ಲಕ್ಷ ಸಂಬಳ ಇರಬೇಕು ಎನಿಸುತ್ತದೆ ಅಲ್ವಾ?

ಅಷ್ಟಕ್ಕೂ ಇವರದ್ದು ಏನು ಕೆಲಸ? ನೀವೇ ಗೆಸ್ ಮಾಡಿ..

ನೀವು ಅಂದುಕೊಂಡ ಐಟಿ ಜಾಬ್ ಅಲ್ಲವೇ ಅಲ್ಲ, ಇವರದ್ದು ನಿಸ್ವಾರ್ಥ ಪ್ರಾಣಿಸೇವೆ, ಗಾಯಗೊಂಡ ಪ್ರಾಣಿಗಳನ್ನು ರಕ್ಷಿಸಿ ಮರಳಿ ಅದರ ಜಾಗಕ್ಕೆ ಬಿಡೋ ನೆಮ್ಮದಿಯ ಕೆಲಸ.

ಕಾಶ್ಮೀರದ ಶ್ರೀನಗರ್‌ನ ದಾವೂದ್ ಮೊಹಮ್ಮದ್ ಮತ್ತು ಪತ್ನಿ ಮರಿಯಾ ಮುಸ್ತಾಕ್ ಪ್ರಾಣಿಗಳಿಗೆ ಮರುಜೀವ ದಾನ ಮಾಡ್ತಿದ್ದಾರೆ. ಶ್ರೀನಗರದಲ್ಲಿ ಎಲ್ಲೇ ಗಾಯಗೊಂಡ ಪ್ರಾಣಿಗಳನ್ನು ಕಂಡರೂ ಜನ ಇವರಿಗೆ ಕರೆ ಮಾಡುತ್ತಾರೆ. ಪ್ರಾಣಿಗಳು ಇರುವ ಜಾಗಕ್ಕೆ ಬಂದು ಅವುಗಳನ್ನು ಆಸ್ಪತ್ರೆಗೆ ಕೊಂಡೊಯ್ದು ಆರೈಕೆ ಮಾಡಿ ವಾಪಾಸ್ ಬಿಡುತ್ತಾರೆ.

ಲಂಡನ್ ರಿಟರ್ನ್

ಲಂಡನ್‌ನಿಂದ ಬಂದಿರುವ ದಾವೂದ್ ಪ್ರಾಣಿಪ್ರೇಮಿ. ತನ್ನ ಕಣಿವೆಯಲ್ಲಿ ಪ್ರಾಣಿಗಳನ್ನು ಸರಿಯಾಗಿ ನೋಡಿಕೊಳ್ಳದೆ, ಕಲ್ಲು ಹೊಡೆಯುವುದು, ಆಕಸ್ಮಿಕವಾಗಿ ಅಪಘಾತವಾದರೆ ಅಲ್ಲೇ ಬಿಟ್ಟು ಹೋಗುವುದನ್ನು ಕಣ್ಣಾರೆ ಕಂಡಿದ್ದಾರೆ. ಈ ರೀತಿ ಆದ ಪ್ರಾಣಿಗಳನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸಿ, ಆಹಾರ ನೀಡಿ ಸಲಹುತ್ತಾರೆ.

Stray dogs at the rescue centre

ದಾವೂದ್‌ಗೆ ಕರೆ ಬರುತ್ತದೆ
ಈ ಹಿಂದೆ ಬರೀ ತನ್ನೂರಿನ ಜನ ಕರೆ ಮಾಡುತ್ತಿದ್ದರೆ ಇದೀಗ ಶ್ರೀನಗರದಲ್ಲಿ ಎಲ್ಲಿ ಏನಾದರೂ ದಾವೂದ್‌ಗೆ ಕರೆ ಬರುತ್ತದೆ. ತನ್ನೂರಿನಲ್ಲಿ ಹೆಚ್ಚು ಬೀದಿನಾಯಿಗಳಿವೆ, ಅವುಗಳಿಗೆ ವ್ಯಾಕ್ಸಿನ್ ಇಲ್ಲ, ಮೈಮೇಲೆ ಮ್ಯಾಗೊಟ್ಸ್‌ನಂಥ ಹುಳಗಳಿವೆ ಆದರೆ ಇದರ ಬಗ್ಗೆ ಯಾರಿಗೂ ಗಮನ ಇಲ್ಲ. ಈ ರೀತಿ ನಾಯಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು ದಾವುದ್ ನೆಚ್ಚಿನ ಕೆಲಸ. ಇದಕ್ಕಾಗಿಯೇ ತಮಗೆ ಪರಿಚಯದ ವೆಟರ್‌ನರಿಯನ್ ಒಬ್ಬರ ಬಳಿ ಎಲ್ಲ ಪ್ರಾಣಿಗಳನ್ನು ಕರೆದುಕೊಂಡು ಹೋಗುತ್ತಾರೆ.

At the rescue centre, animals are given space to stayಮೊದಲ ರೆಸ್ಕ್ಯೂ
ಮೊದಲ ಬಾರಿಗೆ ಮನೆಯ ಬಳಿಯೇ ನಾಯಿಮರಿಯೊಂದನ್ನು ನೋಡಿದೆ, ಹಿಂದಿನ ಕಾಲನ್ನು ಅಲುಗಾಡಿಸಲೂ ಅದಕ್ಕೆ ಸಾಧ್ಯವಾಗಿರಲಿಲ್ಲ. ಮೈ ತುಂಬ ಗಾಯಗಳು, ಅದರಲ್ಲಿ ಮ್ಯಾಗೋಟ್ಸ್ ಹತ್ತಿಕೊಂಡಿತ್ತು. ವೈದ್ಯರ ಬಳಿ ತೋರಿಸಿ ಅದರ ಆರೈಕೆ ಮಾಡಲು ಒಂದೂವರೆ ವರ್ಷ ನನ್ನ ಮನೆಯಲ್ಲಿಯೇ ಇರಿಸಿಕೊಂಡಿದ್ದೆ ಎನ್ನುತ್ತಾರೆ ದಾವೂದ್. ಈ ಘಟನೆ ನನ್ನ ಬದುಕನ್ನೇ ಬದಲಾಯಿಸಿತು. ಪ್ರಾಣಿಗಳ ರಕ್ಷಣೆಗೆ ಮುಂದಾಗುವಂತೆ ಮಾಡಿತು. ಈ ಕಾರ್ಯಕ್ಕೆ ನನ್ನ ಪತ್ನಿಯೂ ಕೈಜೋಡಿಸಿದ್ದಾರೆ ಎನ್ನುತ್ತಾರೆ ದಾವೂದ್.

ಗುಣ ಆದಮೇಲೆ ರೋಡಿಗಿಳಿ
ಲೋಕಲ್ ಮುನ್ಸಿಪಾಲ್ ಕಾರ್ಪೋರೇಷನ್‌ನಲ್ಲಿ ಗಾಯಗೊಂಡ ಪ್ರಾಣಿಗಳಿಗಾಗಿ ಸ್ವಲ್ಪ ಜಾಗ ನೀಡಿದ್ದು, ಅಲ್ಲಿ ಚಿಕಿತ್ಸೆ ಪಡೆದ ಪ್ರಾಣಿಗಳನ್ನು ಬಿಟ್ಟು, ಸಂಪೂರ್ಣ ಗುಣ ಆದ ನಂತರ ಹೊರ ಬಿಡುತ್ತಾರೆ.

ಕಾಲೇ ತೆಗೆಯುವಂತಾಯ್ತು!
ನನ್ನ ಎದುರು ಬೀದಿ ಮನೆಯಲ್ಲಿ ನಾಯಿಮರಿಯೊಂದಿತ್ತು. ಅದರ ಕಾಲು ಮುರಿದಿತ್ತು ಹಾಗೂ ಗಾಯಗಳೂ ಆಗಿತ್ತು. ಅದರ ಓಡಾಟ ನಿಲ್ಲಿಸಲು ಅದಕ್ಕೆ ಚೈನ್ ಹಾಕಿ ಕಟ್ಟಿದ್ದರು. ಇದರಿಂದ ಅದು ಇನ್ನಷ್ಟು ಘಾಸಿಗೊಳಗಾಗಿತ್ತು. ಈ ನಾಯಿಯನ್ನು ರಕ್ಷಿಸಿದೆ. ಆದರೆ ಚೈನ್‌ನಿಂದ ಅದರ ಗಾಯ ಹೆಚ್ಚಾಗಿ ಕಾಲನ್ನು ತೆಗೆಯುವಂತೆ ಆಯ್ತು. ನನ್ನ ಮನೆಯಲ್ಲೇ ಅದಕ್ಕೆ ಆರೈಕೆ ಮಾಡಿದೆ. ಈ ರೀತಿ ಸಾಕಷ್ಟು ಉದಾಹರಣೆಗಳಿವೆ ಎನ್ನುತ್ತಾರೆ ದಾವೂದ್.

A rescue operation

ನನ್ನ ಹೆಮ್ಮೆ
ಇದು ದೊಡ್ಡ ಸಾಧನೆಯಲ್ಲ, ಆದರೆ ಪ್ರಾಣಿಗಳ ಪಾಲಿಗೆ ಜೀವ ಉಳಿಸುವ ಕಾರ್ಯ. ಪ್ರತಿ ಬಾರಿ ಪ್ರಾಣಿಯನ್ನು ರಕ್ಷಿಸಿದಾಗಲೂ ನಾನು ಸಾಧನೆ ಮಾಡಿದ್ದೇನೆ ಎನಿಸುತ್ತದೆ. ನನ್ನ ಸ್ವಂತ ಹಣದಿಂದ, ಯಾರ ಸಹಾಯವೂ ಇಲ್ಲದೆ ಇಷ್ಟು ಮಾಡಿದ್ದು ತೃಪ್ತಿ ಇದೆ. ಈ ಕೆಲಸಕ್ಕೆ ಕೊನೆ ಇಲ್ಲ ಎನ್ನುತ್ತಾರೆ ದಾವೂದ್.

ರಸ್ತೆಯಲ್ಲಿ ಯಾರಿಗಾದರೂ ಅಪಘಾತವಾದಾಗ ಫೋಟೊ, ವಿಡಿಯೋ ಮಾಡುತ್ತಾ ನಿಲ್ಲುವ ಈ ಕಾಲದಲ್ಲಿ, ಪ್ರಾಣಿಪಕ್ಷಿಗಳ ಅಪಘಾತದ ಬಗ್ಗೆ ಆಲೋಚಿಸಿ ಅವುಗಳ ಆರೈಕೆ ಮಾಡುವ ಈ ದಂಪತಿಗೆ ನಮ್ಮ ಸಲಾಂ. ಸದಾ ಈ ಕಾರ್ಯ ಮುಂದುವರಿಯಲಿ ಹಾಗೂ ನೂರಾರು ಮಂದಿ ಇವರಿಂದ ಪ್ರೇರಣೆ ಪಡೆಯಲಿ ಎನ್ನುವುದು ನಮ್ಮ ಸದಾಶಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!