ಹೊಸದಿಗಂತ ವರದಿ, ಹುಬ್ಬಳ್ಳಿ:
ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಒಂದಾದರೆ ನಾವು ಭಯಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಈ ಬಾರಿ 15-20 ಸ್ಥಾನ ಪಡೆದು ನಾವು ಗೆದ್ದೇ ಗೆಲ್ಲತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಎರಡು ಪಕ್ಷಗಳು ಮಾತುಕತೆ ನಡೆಸುತ್ತಿರುವ ಬಗ್ಗೆ ಮಾಹಿತಿ ಇದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾದರೂ ಗೆಲ್ಲುತ್ತೇವೆ. ಇಲ್ಲವಾದರೂ ಗೆಲ್ಲುತ್ತೇವೆ ಎಂದು ಹೇಳಿದರು.
ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗಿದ್ದು, ಪಕ್ಷದ ಸಭೆ ಕರೆಯಲು ಕೆಲವು ಶಾಸಕರು ಪತ್ರ ಬರೆದಿದ್ದಾರೆ ಹೊರತು, ಅಸಮಾಧಾನಗೊಂಡು ಯಾರು ದೂರು ನೀಡಿಲ್ಲ. ಆದ್ದರಿಂದ ಸಭೆ ಕರೆಯಲಾಗುತ್ತಿದೆ ಎಂದು ತಿಳಿಸಿದರು.
ವಾಡಿಕೆಗಿಂತಲೂ ಹೆಚ್ಚು ಮಳೆ
ಜೂನ್ ತಿಂಗಳಲ್ಲಿ ಮಳೆಯ ಅಭಾವ ಹೆಚ್ಚಾಗಿತ್ತು. ಈಗ ನಿರಂತರವಾಗಿ ಮಳೆಯಾಗುತ್ತಿದೆ. ವಾಡಿಕೆ ಮಳೆಗಿಂತ ಜಾಸ್ತಿ ಆಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅಲ್ಲಿ ಹೋಗುತ್ತಿದ್ದೇನೆ ಎಂದರು.
ಮಳೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ
ಮಳೆ ಜಾಸ್ತಿಯಾಗಿರುವ ಪ್ರದೇಶಕ್ಕೆ ತಂಡ ರಚಿಸಿಕೊಂಡು ಭೇಟಿ ನೀಡುವ ಕಾರ್ಯ ಮಾಡಲಾಗುತ್ತದೆ. ಉಡುಪಿ, ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ. ಈಗಾಗಲೇ ಸಚಿವರು ಸಮಸ್ಯೆ ಆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಿದ್ದಾರೆ ಎಂದು ತಿಳಿಸಿದರು.
ಯೋಜನೆಗಳಿಗೆ ಅರ್ಜಿ ಸಲ್ಲಿಕೆ ವೇಳೆ ಅಕ್ರಮ ನಡೆದರೆ ಕ್ರಮ
ಗ್ರಾಮ್ ಒನ್ ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಗೃಹ ಲಕ್ಷ್ಮಿ ಸೇರಿದಂತೆ ವಿವಿಧ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆದರೆ ಅವರ ಮೇಲೆ ಕ್ರಿಮಿನಲ್ ಪ್ರಕರಣ ಹಾಕಲಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಬಂದರೆ ಬರಗಾಲ ಎಂಬುದು ಮೂಢನಂಬಿಕೆ
ಪ್ರಕೃತಿ ವಿಕೋಪ ಸಾಮಾನ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಬಿಜೆಪಿ ಬಂದರೇ ಪ್ರವಾಹ, ಕಾಂಗ್ರೆಸ್ ಅಧಿಕಾರದಲ್ಲಿದ್ದರೇ ಬರಗಾಲ ಎಲ್ಲವೂ ಮೂಢ ನಂಬಿಕೆ. ಅದನ್ನು ನಾನು ನಂಬುವುದಿಲ್ಲ ಎಂದು ತಿಳಿಸಿದರು.