ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಘೋಷಣೆ ಮಾಡಿರುವ ಕರ್ನಾಟಕ ಸರ್ಕಾರದ ನಡೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಕರ್ನಾಟಕ ಕಾಂಗ್ರೆಸ್ ಸರ್ಕಾರದಮ ಮುಸ್ಲಿಂ ಮೀಸಲಾತಿ ನಿರ್ಧಾರ ಸಂವಿಧಾನ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವೇ ಇಲ್ಲ. ಆದರೆ ಕಾಂಗ್ರೆಸ್ ತನ್ನ ತುಷ್ಟೀಕರಣ ರಾಜನೀತಿಯ ಭಾಗವಾಗಿ, ಮುಸ್ಲಿಮರನ್ನು ಓಲೈಸಲು ಸಂವಿಧಾನವನ್ನು ತಿರುಚುವ ಮಟ್ಟಕ್ಕೆ ಇಳಿಯುತ್ತದೆ. ಇದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಸರ್ಕಾರಿ ಗುತ್ತಿಗೆ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಯೋಜನೆಯೇ ಜ್ವಲಂತ ಉದಾಹರಣೆ. ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕ ಸರ್ಕಾರವು ಈ ರೀತಿ ಮಾಡಿರುವುದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನಕ್ಕೆ ಮಾಡಿದ ಅವಮಾನವಲ್ಲದೇ ಬೇರೆನೂ ಅಲ್ಲ. ಕಾಂಗ್ರೆಸ್‌ನವರು ಈಗ ಮಾತೆತಿದ್ದರೆ ಸಂವಿಧಾನ ಅಪಾಯದಲ್ಲಿದೆ, ಸಂವಿಧಾನವನ್ನು ನಾವು ರಕ್ಷಣೆ ಮಾಡುತ್ತೆವೆ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಮತ್ತೊಂದು ಕಡೆ ಧರ್ಮಾಧಾರಿತ ಮೀಸಲಾತಿ ಘೋಷಿಸಿ, ಅದೇ ಸಂವಿಧಾನಕ್ಕೆ ಅಪಮಾನ ಮಾಡುತ್ತಾರೆ. ಕಾಂಗ್ರೆಸ್‌ನ ಈ ದ್ವಂದ್ವ ನೀತಿ ನಿಜಕ್ಕೂ ಖಂಡನೀಯ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆಕ್ರೋಶ ಹೊರಹಾಕಿದರು.
ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಿಜಕ್ಕೂ ಅಷ್ಟೊಂದು ಕಾಳಜಿ ಇದ್ದರೆ, ಕರ್ನಾಟಕದಲ್ಲಿ ಜಾರಿಯಾಗಿರುವ ಮುಸ್ಲಿಂ ಮೀಸಲಾತಿಯನ್ನು ಹಿಂಪಡೆಯುವಂತೆ ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಲಿ ಎಂದು ಯೋಗಿ ಆದಿತ್ಯನಾಥ್ ಸವಾಲೆಸೆದರು.