ಸಿಎಂ ಸಿದ್ದರಾಮಯ್ಯ ಆಯ್ಕೆಯನ್ನು ಚುನಾವಣಾ ಆಯೋಗ ಅಸಿಂಧುಗೊಳಿಸದಿದ್ದರೆ ನ್ಯಾಯಾಲಯದ ಮೊರೆ: ಶಾಸಕ ಟಿ.ಎಸ್.ಶ್ರೀವತ್ಸ

ಹೊಸದಿಗಂತ ವರದಿ, ಮೈಸೂರು :

ವರುಣ ಕ್ಷೇತ್ರದ ಚುನಾವಣೆಯಲ್ಲಿ ಮತದಾರರಿಗೆ ಕುಕ್ಕರ್ ಹಾಗೂ ಇಸ್ತ್ರಿ ಪೆಟ್ಟಿಗೆ ಹಂಚುವ ಮೂಲಕ ಆಮಿಷವೊಡ್ಡಿ ಶಾಸಕರಾಗಿ ಸಿಎಂ ಸಿದ್ದರಾಮಯ್ಯ ಆಯ್ಕೆಯಾಗಿದ್ದು, ಅವರ ಆಯ್ಕೆಯನ್ನು ಚುನಾವಣಾ ಆಯೋಗ ಅಸಿಂಧುಗೊಳಿಸಬೇಕು ಎಂದು ಬಿಜೆಪಿಯ ಮೈಸೂರು ನಗರಾಧ್ಯಕ್ಷರೂ ಆದ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದರು.

ಶುಕ್ರವಾರ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಿಎಂ ಸಿದ್ದರಾಮಯ್ಯನವರು, ಮತದಾರರಿಗೆ ಕುಕ್ಕರ್, ಇಸ್ತ್ರಿ ಪೆಟ್ಟಿಗೆಯನ್ನು ಹಂಚಿ ಅಕ್ರಮವಾಗಿ ಗೆದ್ದಿದ್ದಾರೆ. ಕುಕ್ಕರ್, ಇಸ್ತಿç ಪೆಟ್ಟಿಗೆ ಹಂಚಿದ್ದನ್ನು, ಅವರ ಪುತ್ರರಾದ ಮಾಜಿ ಶಾಸಕ ಡಾ. ಯತಿಂದ್ರಸಿದ್ದರಾಮಯ್ಯನವರೇ ಸಭೆಯೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿಯಿಂದ ರಾಜ್ಯ ಚುನಾವಣಾ ಆಯೋಗ, ಕೇಂದ್ರ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ನೀಡಲಾಗಿದೆ. ಈ ಬಗ್ಗೆ ಆಯೋಗ ಕ್ರಮಕೈಗೊಂಡು, ಸಿದ್ದರಾಮಯ್ಯನವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು, ಇಲ್ಲದಿದ್ದರೆ ಚುನಾವಣೆ ಆಯೋಗದ ವಿರುದ್ಧವೇ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚುನಾವಣೆಯಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಅಕ್ರಮ ಎಸಗಿರುವುದನ್ನು ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರರವರೇ ಖುದ್ದು ಹೇಳಿಕೆ ನೀಡಿರುವುದರಿಂದ ಚುನಾವಣಾ ಆಯೋಗಕ್ಕೆ ಬೇರೆ ಯಾವ ಸಾಕ್ಷ್ಯಧಾರಗಳ ಅವಶ್ಯಕತೆಯೂ ಬೀಳುವುದಿಲ್ಲ. ಜನತಾ ಪ್ರಾತಿನಿಧ್ಯ ಅಧಿನಿಯಮ 1951ರ ಕಾಯ್ದೆಯ ಸೆಕ್ಷನ್ 123(1), 2 ಹಾಗೂ 4 ರಲ್ಲಿ ಉಲ್ಲೇಖಿಸಿರುವಂತೆ ಮತದಾರರಿಗೆ ಯಾವುದೇ ಆಮಿಷಗಳನ್ನು ನೀಡಬಾರದು ಎಂದು ಹೇಳಲಾಗಿದೆ. ಇದನ್ನು ಸಿದ್ದರಾಮಯ್ಯನವರು ಉಲ್ಲಂಘಿಸಿ, ಕುಕ್ಕರ್, ಇಸ್ತಿçಪೆಟ್ಟಿಗೆ ಹಂಚಿದ್ದಲ್ಲದೆ, ಪಂಚ ಗ್ಯಾರಂಟಿ ಯೋಜನೆಗಳ ಕಾರ್ಡ್ಗೆ ಸಹಿ ಹಾಕಿ ವಿತರಿಸುವ ಮೂಲಕ ವಾಮಾ ಮಾರ್ಗದಿಂದ ಶಾಸಕರಾಗಿ ಆಯ್ಕೆಯಾಗಿರುವುದರಿಂದ, ಅವರ ಆಯ್ಕೆಯನ್ನು ಅಸಿಂಧುಗೊಳಿಸಲು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮರ್ಥವಾದ ಮಂಡಿಸುವಲ್ಲಿ ವಿಫಲ; ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಡಿಎಂಕೆ ಮೈತ್ರಿ ಮುರಿದು ಬೀಳಬಹುದು ಎಂಬ ಆತಂಕದಿoದ ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಅರ್ಜಿ ಹಾಕಿದ ತಕ್ಷಣವೇ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿದ್ದಾರೆ. ನೀರು ಹರಿಸುವ ಬದಲು ರಾಜ್ಯದಲ್ಲಿನ ಜಲಾಶಯಗಳಲ್ಲಿನ ನೀರಿನ ಅಭಾವ ಪರಿಸ್ಥಿತಿಯನ್ನು ತಮಿಳುನಾಡಿಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಬೇಕಾಗಿತ್ತು. ಆದರೆ ಆ ಕೆಲಸ ಮಾಡದೆ, ಸಾಕಷ್ಟು ನೀರು ಬಿಟ್ಟು, ಈಗ ಕುಡಿಯುವುದಕ್ಕೂ ನೀರಿಲ್ಲದಂತಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಶಿವಕುಮಾರ್, ಉಪಮೇಯರ್ ರೂಪ, ಬಿಜೆಪಿಯ ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಗ್ರಾಮಾಂತರ ಅಧ್ಯಕ್ಷೆ ಮಂಗಳಸೋಮಶೇಖರ್, ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ಸೋಮಸುಂದರ್, ಜಿಲ್ಲಾ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ಸಂಚಾಲಕ ಪ್ರದೀಪ್ ಕುಮಾರ್, ವಕ್ತಾರರಾದ ಮೋಹನ್, ವಸಂತ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!