ಹೊಸದಿಗಂತ ವರದಿ ಬೆಳಗಾವಿ:
ಕಬ್ಬಿಗೆ ₹5,500 ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿರುವ ರೈತರ ಬೇಡಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಿಮ್ಮತ್ತು ನೀಡುತ್ತಿಲ್ಲ. ಸರ್ಕಾರಗಳು ರಾಜಕಾರಣ ಮಾಡಲಿ, ಆದರೆ ರೈತರ ವಿಚಾರದಲ್ಲಿ ರಾಜಕಾರಣ ಮಾಡಲು ಬಿಡುವುದಿಲ್ಲ ಎಂದು ರೈತ ಹೋರಾಟಗಾರರು ಎಚ್ಚರಿಕೆ ನೀಡಿದರು.

ಇತ್ತೀಚೆಗೆ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರೈತರೊಂದಿಗೆ ಸಭೆ ನಡೆಸಿ, ಚಾಕೊಲೇಟ್ ನೀಡಿ ಸಮಾಧಾನಪಡಿಸುವ ಕೆಲಸ ಮಾಡಿ ಹೋಗಿದ್ದಾರೆ. ಇನ್ನು ಮುಂದೆ ಸರ್ಕಾರದ ಇಂತಹ ಆಟ ನಡೆಯುವುದಿಲ್ಲ. ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳವಾರ ಮಧ್ಯಾಹ್ನ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾಧಿಕಾರಿ, ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ನಡುವೆ ಸಭೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ಅಡುಗೆ ಸಿದ್ಧಪಡಿಸಿ ಊಟ ಮಾಡಿದರು.
ಇದನ್ನೂ ಓದಿ:
ಸಭೆಯಲ್ಲಿ ರೈತರ ಪರವಾಗಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೇ ರಾತ್ರಿ ಅಡುಗೆ ಮಾಡಿ, ಇಲ್ಲಿಯೇ ವಾಸ್ತವ್ಯ ಹೂಡುತ್ತೇವೆ. ಹೋರಾಟಕ್ಕೆ ಸೂಕ್ತ ಪ್ರತಿಫಲ ಸಿಗುವವರೆಗೆ ಕಚೇರಿ ಆವರಣದಿಂದ ಕದಲುವುದಿಲ್ಲ ಎಂದು ರೈತ ಮುಖಂಡ ಗಣೇಶ ಇಳಗೇರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.



