Monday, March 4, 2024

ಸಂಸದರಿಗೆ ಜೀವ ಬೆದರಿಕೆ ಇದ್ದರೆ ಪೊಲೀಸ್ ಇಲಾಖೆಗೆ ದೂರು ನೀಡಲಿ: ರೇಣುಕಾಚಾರ್ಯ ಸಲಹೆ

ಹೊಸದಿಗಂತ ವರದಿ,ದಾವಣಗೆರೆ:

ಸಂಸದರಿಗೆ ಜೀವ ಬೆದರಿಕೆ ಇದ್ದರೆ ಪೊಲೀಸ್ ಇಲಾಖೆಗೆ ದೂರು ನೀಡಲಿ. ಪ್ರಧಾನಿ, ಕೇಂದ್ರ ಗೃಹ ಸಚಿವರು, ಮುಖ್ಯಮಂತ್ರಿ, ರಾಜ್ಯ ಗೃಹಮಂತ್ರಿಗಳಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಲಿ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಲಹೆ ಮಾಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಹಿರಿಯರಿದ್ದಾರೆ. ಒಂದು ವೇಳೆ ಸಂಸದರಿಗೆ ಯಾರಿಂದಲಾದರೂ ಜೀವ ಬೆದರಿಕೆ ಇದ್ದರೆ ಗಾಳಿಯಲ್ಲಿ ಗುಂಡು ಹೊಡೆಯುವ ಬದಲು ನೇರವಾಗಿ ಪೊಲೀಸ್ ಇಲಾಖೆಗೆ ದೂರು ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸೂಕ್ತ ತನಿಖೆಗೆ ಒತ್ತಾಯಿಸಬೇಕು ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೀಗೆಲ್ಲಾ ಮಾತನಾಡಿದ್ದಾರೋ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುವುದೂ ಸರಿಯಲ್ಲ. ಯಾರೇ ಹೀಗೆ ಜೀವ ಬೆದರಿಕೆ ಹಾಕಿದ್ದರೆ ಅಂತಹ ನೀಚ ಕೃತ್ಯವನ್ನು ನಾವು ಖಂಡಿಸುತ್ತೇವೆ. ಒಂದು ವೇಳೆ ಸಂಸದರಿಗೆ ಯಾರಿಂದಲಾದರೂ ಬೆದರಿಕೆ ಇದ್ದರೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕೆಂಬುದು ನಮ್ಮೆಲ್ಲರ ಆಸೆ ಮತ್ತು ಗುರಿಯಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲೂ ಬಿಜೆಪಿಯನ್ನು ಗೆಲ್ಲಿಸುವ ಗುರಿ ಹೊಂದಿದ್ದಾರೆ. ದಾವಣಗೆರೆ ನೂತನ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್ ನೇತೃತ್ವದಲ್ಲಿ ನಾವೆಲ್ಲರೂ ಒಟ್ಟಾಗಿ ಸಾಗುತ್ತೇವೆ. ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಅವರು ತಿಳಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ 6 ಸಲ ಗೆದ್ದಿದೆ. 2 ಸಲ ಸಂಸದರಾದ ದಿವಂಗತ ಜಿ.ಮಲ್ಲಿಕಾರ್ಜುನಪ್ಪನವರ ಬಗ್ಗೆ ನಮಗೆ ಅಪಾರ ಗೌರವವಿದೆ. ಕೇಂದ್ರದ ಯೋಜನೆಗಳನ್ನು ಜನರಿಗೆ ತಲುಪಿಸಿದವರು ಹಿರಿಯರಾದ ಮಲ್ಲಿಕಾರ್ಜುನಪ್ಪ. ಈಗಿನ ಸಂಸದರು 4 ಬಾರಿ ಆಯ್ಕೆಯಾಗಿದ್ದಾರೆ. ಬರೀ ಹೊರಗಿನ ಜಿಲ್ಲೆಯವರೇ ಸಂಸದರಾದರೆ ಹೇಗೆ? ನಾವು ಯಾವುದೇ ಪಿತೂರಿ ಮಾಡುತ್ತಿಲ್ಲ. ದಾವಣಗೆರೆ ಜಿಲ್ಲೆಯವರಿಗೂ ಅವಕಾಶ ನೀಡಲಿ ಎಂಬುದು ಜನರ ಅಪೇಕ್ಷೆ. ಹೊಸ ಮುಖಕ್ಕೆ ಅವಕಾಶ ನೀಡಲಿ ಎಂಬುದು ಕಾರ್ಯಕರ್ತರ ಬೇಡಿಕೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!