ಬಿಜೆಪಿಯಿಂದ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ: ಸಂಸದೆ ಸುಮಲತಾ ಅಂಬರೀಶ್

ಹೊಸದಿಗಂತ ವರದಿ,ಮಂಡ್ಯ :

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿದರೆ ಮಂಡ್ಯದಿಂದ ಸ್ಪರ್ಧೆ ಮಾಡುವೆ. ಇಲ್ಲದಿದ್ದರೆ ಪಕ್ಷೇತರವಾಗಿ ಕಣಕ್ಕಿಳಿಯುವುದಾಗಿ ಸಂಸದೆ ಸುಮಲತಾ ಅಂಬರೀಶ್ ಶನಿವಾರ ಸುಳಿವು ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಕೆ.ಎಂ. ದೊಡ್ಡಿ ಗ್ರಾಮದಲ್ಲಿ ಅಂಬರೀಶ್ ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದರು.

ಮಂಡ್ಯ ನನ್ನ ಕರ್ಮಭೂಮಿ, ಈ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುವುದು ನನ್ನ ಬಯಕೆಯಾಗಿದೆ ಎಂದರು.
ನನ್ನ ಸ್ಪರ್ಧೆ ಸಂಬಂಧ ಹರಡಿರುವ ವದಂತಿಗಳಿಗೆ ಬೆಂಬಲಿಗರೂ ಸೇರಿದಂತೆ ಯಾರೂ ಕಿವಿಗೊಡಬಾರದು. ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆನ್ನುವುದು ನಾನು ಅಂತಿಮವಾಗಿ ಬಯಸಿದ್ದೇನೆ. ಈ ಬಗ್ಗೆ ಮಾರ್ಚ್ ನಂತರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಮಂಡ್ಯದಲ್ಲಿ ನನ್ನ ಪತಿ ಅಂಬರೀಶ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಅಂಬರೀಶ್ ಮೂರು ಬಾರಿ ಮಂಡ್ಯದಿಂದ ಆಯ್ಕೆಯಾಗಿದ್ದಾರೆ. ಸಾಕಷ್ಟು ಜನಪ್ರಿಯತೆ ಕೆಲಸಗಳನ್ನು ಮಾಡಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ. ಅವರ ಅಭಿಮಾನಿಗಳು ಕ್ಷೇತ್ರದಿಂದಲೇ ಕಣಕ್ಕಿಳಿಯಬೇಕೆಂಬ ಉತ್ಕೃಷ್ಠ ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆಗೊಂಡಿಲ್ಲ. ಬೆಂಬಲ ನೀಡಿದ್ದೇನೆ ಹೊರತು ಪಕ್ಷ ಪಕ್ಷದ ತೀರ್ಮಾನಗಳಲ್ಲಿ ಭಾಗಿಯಾಗಿಲ್ಲ. ನಾನಿನ್ನೂ ಸ್ವತಂತ್ರ ಲೋಕಸಭಾ ಸದಸ್ಯೆ. ನಂತರದ ದಿನಗಳಲ್ಲಿ ನನ್ನ ಸ್ಪಷ್ಟ ನಿರ್ಧಾರ ಪ್ರಕಟಿಸುತ್ತೇನೆ ಎಂದರು.

ಮಾತುಕತೆ ಮೂಲಕ ಕಾವೇರಿ ವಿವಾದ ಬಗೆಹರಿಸುವುದು ಸೂಕ್ತ
ಕಾವೇರಿ ನದಿ ನೀರಿನ ವಿವಾದವನ್ನು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಸಂಸದೆ ಸುಮಲತಾ ಅಂಬರೀಶ್ ಅಭಿಪ್ರಾಯಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರ ಅಥವಾ ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ವಿವಾದಕ್ಕೆ ಕರ್ನಾಟಕಕ್ಕೆ ಇದುವರೆಗೆ ಸಮರ್ಪಕವಾಗ ನ್ಯಾಯ ದೊರಕಿಲ್ಲ. ಈ ಬಗ್ಗೆ ಎಷ್ಟೇ ಹೋರಾಟ ನಡೆಸಿದರೂ ಸಹ ಪ್ರತಿಫಲ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಮಿಳುನಾಡು, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರ ನೀಡುವ ತೀರ್ಪನ್ನು ಪಾಲಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ನಮ್ಮ ರೈತರ ಹಿತವನ್ನೂ ಪ್ರಥಮವಾಗಿ ಗಮನದಲ್ಲಿರಿಸಿಕೊಂಡು ಸರ್ಕಾರ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಳೆದ ನೂರು ವರ್ಷಗಳಿಂದ ಕಾವೇರಿ ನದಿ ನೀರಿನ ಸಮಸ್ಯೆ ಕರ್ನಾಟಕವನ್ನು ಕಾಡುತ್ತಿದೆ. ಇದಕ್ಕೆ ಸರ್ಕಾರ ಶಾಶ್ವತವಾಗಿ ಪರಿಹಾರ ದೊರಕಿಸಿಕೊಡಲು ಚಿಂತನೆ ಮಾಡಬೇಕು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ಇಚ್ಚಾಶಕ್ತಿ ಇದ್ದಂತೆ ಕಾಣುತ್ತಿಲ್ಲ ಎಂದು ಅವರು ದೂಷಣೆ ಮಾಡಿದರು.

ಜಿಲ್ಲೆಯಲ್ಲಿ ರೈತರ ಕಬ್ಬು ಮತ್ತು ರಾಗಿ ಬೆಳೆಗೆ ಕನಿಷ್ಠ ಸರ್ಕಾರ ಕೆ.ಆರ್.ಎಸ್. ಜಲಾಶಯದಿಂದ ನೀರು ಒದಗಿಸಿ ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವ ಪ್ರಯತ್ನ ಮಾಡಬೇಕು. ರೈತರು ಸಹ ಸರ್ಕಾರವನ್ನು ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಂಸದೆ ಸುಮಲತಾ ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ವಿವೇಕಾನಂದ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ದೊಡ್ಡೇಗೌಡ, ಮುಖಂಡರಾದ ಕೋಣಸಾಲೆ ಜಯರಾಮು, ರಾಮಸ್ವಾಮಿ, ಕೆ.ಎಂ. ದೊಡ್ಡಿ ಶಶಿಕುಮಾರ್, ರೈತ ಸಂಘದ ಮುಖಂಡರಾದ ರಾಮಕೃಷ್ಣಯ್ಯ, ಕುದರಗುಂಡಿ ನಾಗರಾಜು, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಅಮರ್‌ಬಾಬು ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!