ವಚನ ಭ್ರಷ್ಟರಾದರೆ ಕುಮಾರಸ್ವಾಮಿಗೆ ಆದ ಗತಿ ಬೊಮ್ಮಾಯಿ ಅವರಿಗೂ ಆಗುತ್ತೆ‌: ಯತ್ನಾಳ ಎಚ್ಚರಿಕೆ

ಹೊಸದಿಗಂತ ವರದಿ ವಿಜಯಪುರ:
ಪಂಚಮಸಾಲಿ‌ಗೆ ಡಿ. 29 ರಂದು ಮೀಸಲಾತಿ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ‌. ಒಂದು ವೇಳೆ ವಚನ ಭ್ರಷ್ಟರಾದರೆ ಕುಮಾರಸ್ವಾಮಿ ಅವರಿಗಾದ ಗತಿ ಬೊಮ್ಮಾಯಿ ಅವರಿಗೂ ಆಗುತ್ತೆ‌ ಎಂದು ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಚ್ಚರಿಕೆ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೀಸಲಾತಿ ಘೋಷಣೆ ಆಗುವ ಭರವಸೆ ಇದೆ. 2 ಎ ಸಮಾನವಾದ ಮೀಸಲಾತಿ ಸಿಗುತ್ತದೆ. ತಾಯಿ ಆಣೆ ಮಾಡಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ ಎಂದರು.
ಪಂಚಮಸಾಲಿ‌ 2ಎ ಮೀಸಲಾತಿ ನೀಡುವುದಾಗಿ ತಾಯಿ ಆಣೆ ಮಾಡಿದ್ದಾರೆ. ತಾಯಿ ಆಣೆ ಮಾಡಿದ್ಮೇಲೆ ಕೊಡಲಿಲ್ಲ ಅಂದರೆ ಏನು ಆಗುತ್ತದೆ ನೋಡಿ. ಆಣೆ ಮಾಡಿದ್ಮೇಲೂ ಎಚ್‌ಡಿ ಕುಮಾರಸ್ವಾಮಿ ಬಿಜೆಪಿಗೆ ಅಧಿಕಾರ ನೀಡಲಿಲ್ಲ. ಅದಕ್ಕಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎಂದರು.
ಸಿಎಂ ತಮ್ಮ ಭರವಸೆ ಈಡೇರಿಸುತ್ತಾರೆ. ಬೇರೆ ಸಮಾಜದವರು ಮೀಸಲಾತಿ ಕೇಳುವ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಸರ್ಕಾರ ಎಲ್ಲವನ್ನೂ ಪರಿಶೀಲಿಸಿ ನಮಗೆ ಮೀಸಲಾತಿ ನೀಡುವ ವಿಶ್ವಾಸವಿದೆ ಎಂದರು.
ಜನಾರ್ಧನರೆಡ್ಡಿ ನೂತನ ಪಕ್ಷ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾವು ನಮ್ಮ ಪಕ್ಷದ ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆಯಬೇಕು ಎಂಬುದಷ್ಟೆ ನಮ್ಮ ಮುಂದಿನ ಗುರಿ ಇದೆ‌. ಯಾರು ಪಕ್ಷ ಮಾಡಿದರು, ಯಾರು ಪಕ್ಷ ಬಿಟ್ಟರು? ಎಂಬುದು ನಮಗೆ ಮುಖ್ಯವಲ್ಲ. ಇನ್ನು ಕೆಲವರು ಪಕ್ಷ ಬಿಟ್ಟು ಹೋಗುವವರೂ ಇದ್ದಾರೆ, ಹೊಸದಾಗಿ ಪಕ್ಷಕ್ಕೆ ಬರೋರು ಇದ್ದಾರೆ ಎಂದರು.
ಕೆಲವೊಂದು ಮಂದಿ ಪ್ರಾಣ ಹೋದರು ಸೋನಿಯಾಗಾಂಧಿ ಅವರನ್ನು ಬಿಟ್ಟು ಬೇರೆ ಪಕ್ಷ ಸೇರೋದಿಲ್ಲ ಅಂತ ನಾಟಕ ಮಾಡುತ್ತಾರೆ. ಅಲ್ಲಿ ದೆಹಲಿಗೆ ಹೋಗಿ ನಾವು ಬಿಜೆಪಿ ಸೇರ್ತಿವಿ ಎಂದು ಇಲ್ಲಿಯವರೇ ಒಂದಿಬ್ಬರು ಓಡಾಡ್ತಿದ್ದಾರೆ ಎಂದರು.
ಸಚಿವ ಸಂಪುಟ ಚರ್ಚೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನಾನು ಸಂಪುಟ ವಿಚಾರದಲ್ಲಿ ಇಲ್ಲವೇ ಇಲ್ಲ. ಈಶ್ವರಪ್ಪ, ರಮೇಶ ಜಾರಕಿಹೊಳಿ, ಸಿ.ಪಿ. ಯೊಗೇಶ್ವರ ಅವರು ಮಂತ್ರಿ ಆಗಬೇಕು ಅಂತಿದಾರೆ. ನಾನು ಸಿಎಂ ಬೊಮ್ಮಾಯಿ ಅವರಿಗೆ ಹೇಳಿದ್ದು ಇಷ್ಟೆ. ಮೀಸಲಾತಿ ಕೊಡಿ, ಕಥೆ ಹೇಳಬೇಡಿ ಎಂದು ಮೀಸಲಾತಿ ವಿಚಾರದಲ್ಲಿ ಸ್ಪಷ್ಟವಾಗಿ ಎಂದಿದ್ದೇನೆ ಎಂದರು. ನಮಗೇನು ಸಚಿವ ಸ್ಥಾನ ಬೇಕಾಗಿಲ್ಲ, ಮೂರು ತಿಂಗಳ ಮಂತ್ರಿ ಆಗೋದು ಅವಶ್ಯಕತೆ ಇಲ್ಲ. ನನಗೇನು ಮಂತ್ರಿ ಆಗಬೇಕು ಎಂಬುದು ಇಲ್ಲ, ನಾನು ತಲೆ ಕೆಡಿಸಿಕೊಂಡಿಲ್ಲ, ನಾ‌ ಆಗೋದು ಇಲ್ಲಾ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!