ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಈ ವೇಳೆ 2002ರಲ್ಲಿ ಮತದಾನ ಮಾಡಿದ ದಾಖಲೆ ನೀಡುವುದು ಕಡ್ಡಾಯವಾಗಿದೆ. ಆದರೆ 2002ರ ದಾಖಲೆ ಸಿಗಲಿಲ್ಲ ಎಂದಾದರೆ ಆತಂಕ ಬೇಡ, ಪರ್ಯಾಯ ಮಾರ್ಗವಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಸ್‌ಐಆರ್ ವೇಳೆ ಗಣತಿ ನಮೂನೆ ಭರ್ತಿ ಮಾಡೋದಕ್ಕೆ 2002ರ ಮತದಾರರ ಪಟ್ಟಿಯಲ್ಲಿ ಪೋಷಕರ ಹೆಸರು ಸಿಗುತ್ತಿಲ್ಲ ಎಂದು ರಾಜ್ಯದ ಮತದಾರರು ದೂರಿದ್ದಾರೆ. ಆದರೆ ಈ ರೀತಿ ಆದಾಗ ನಿಮ್ಮ ಆಪ್ತ ಕುಟುಂಬ ಸದಸ್ಯರ ಹೆಸರು 2002ರ ಎಸ್‌ಐಆರ್ ಪಟ್ಟಿಯಲ್ಲಿ ಇಲ್ಲದಿದ್ದರೆ, ಸಂತತಿ ಅಥವಾ ಸಂಬಂಧಿಕರ ಮ್ಯಾಪಿಂಗ್ ಆಯ್ಕೆ ಮಾಡಬಹುದು. ಇಲ್ಲವೇ, ಕ್ಲೈಮ್ಸ್ ಅಂಡ್ ಆಬ್ಜೆಕ್ಷನ್ಸ್ ಅವಧಿಯಲ್ಲಿ ಫಾರ್ಮ್-6 ಸಲ್ಲಿಸಿ ಹೊಸ ಮತದಾರರಾಗಿ ನೋಂದಣಿ ಮಾಡಿಸಬಹುದು ಎಂದು ಕರ್ನಾಟಕದ ಜಂಟಿ ಮುಖ್ಯ ಚುನಾವಣಾಧಿಕಾರಿ ಎಸ್. ಯೋಗೇಶ್ವರ್ ತಿಳಿಸಿದ್ದಾರೆ.
2025ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ 2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, 2002ರ ಪಟ್ಟಿಯಲ್ಲಿ ಹೆಸರು ಹೊಂದಿರುವ ಸಂಬಂಧಿಕರ ವಿವರವನ್ನು ನಮೂದಿಸಬೇಕು. 2002ರ ಮತದಾರರ ಪಟ್ಟಿಯನ್ನು https://voters.eci.gov.in ಮೂಲಕ ಪರಿಶೀಲಿಸಬಹುದು. ಪೋಷಕರ ಹೆಸರು 2002ರ ಪಟ್ಟಿಯಲ್ಲಿ ಇಲ್ಲದಿದ್ದರೂ ಆತಂಕಪಡುವ ಅಗತ್ಯವಿಲ್ಲ. ಪೋಷಕರ ಸಹೋದರ-ಸಹೋದರಿಯರು ಸೇರಿದಂತೆ ತಂದೆ ಅಥವಾ ತಾಯಿಯ ಕಡೆಯ ಯಾವುದೇ ಸಂಬಂಧಿಕರ ಹೆಸರನ್ನು ಮ್ಯಾಪ್ ಮಾಡಬಹುದು. ಆ ಸಂಬಂಧಿಕರು ಭಾರತದ ಯಾವುದೇ ಭಾಗದಲ್ಲಿ ಮತದಾರರಾಗಿದ್ದರೂ, ಕೇಂದ್ರಿಕೃತ ಪೋರ್ಟಲ್ ಮೂಲಕ ಬಿಎಲ್‌ಒ ಪರಿಶೀಲನೆ ನಡೆಸಬಹುದು ಎಂದು ಯೋಗೇಶ್ವರ್ ತಿಳಿಸಿದ್ದಾರೆ.
ಈ ಸಂಬಂಧವನ್ನು ಸಾಬೀತುಪಡಿಸಲು ಎಣಿಕೆ ನಮೂನೆಯೊಂದಿಗೆ ಯಾವುದೇ ದಾಖಲೆ ಸಲ್ಲಿಸುವ ಅಗತ್ಯವಿಲ್ಲ. ಆದರೆ, ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಪರಿಶೀಲನೆಗಾಗಿ ನೋಟಿಸ್ ಬಂದರೆ ಮಾತ್ರ, ಚುನಾವಣಾ ಆಯೋಗ ಅನುಮೋದಿಸಿರುವ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕಾಗುತ್ತದೆ.ಇನ್ನು, 2002ರ ಪಟ್ಟಿಯಲ್ಲಿ ಯಾವುದೇ ಸಂಬಂಧಿಕರ ಹೆಸರೂ ಇಲ್ಲದಿದ್ದರೆ, ಅಂತಹ ವ್ಯಕ್ತಿಯನ್ನು ಹೊಸ ಮತದಾರ ಎಂದು ಪರಿಗಣಿಸಲಾಗುತ್ತದೆ.



