ಜಗತ್ತನ್ನು ಕಾಡುತ್ತಿರುವ ಭಯಾನಕ ರೋಗಗಳಲ್ಲಿ ಕ್ಯಾನ್ಸರ್ ಕೂಡ ಒಂದು. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದ್ದರೂ, ಈ ರೋಗಕ್ಕೆ ಇನ್ನೂ ಶಾಶ್ವತ ಚಿಕಿತ್ಸೆ ಲಭ್ಯವಾಗಿಲ್ಲ. ಆದರೆ, ಕ್ಯಾನ್ಸರ್‌ನ ಅಪಾಯವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಗುಣಪಡಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಈ ಹಿನ್ನೆಲೆಯಲ್ಲಿ ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ನಿರ್ಲಕ್ಷಿಸದೇ ಗಮನಿಸುವುದು ಅತ್ಯಂತ ಮುಖ್ಯ.
ದೇಹದಲ್ಲಿ ಹುಣ್ಣುಗಳು ಮತ್ತು ದದ್ದುಗಳು
ಹಠಾತ್ತನೆ ದೇಹದಲ್ಲಿ ಹುಣ್ಣು ಕಾಣಿಸಿಕೊಂಡು ನಿರಂತರವಾಗಿ ಬೆಳೆಯುತ್ತಾ ಹೋದರೆ ಅದು ಕ್ಯಾನ್ಸರ್‌ನ ಮೊದಲ ಸೂಚನೆ ಆಗಿರಬಹುದು. ಕೆಲವೊಮ್ಮೆ ಮೊಡವೆ ತರಹದ ದದ್ದುಗಳಿಂದ ಆರಂಭವಾಗುವ ಸಾಧ್ಯತೆಯೂ ಇದೆ. ಇಂತಹ ಬದಲಾವಣೆಗಳನ್ನು ತಕ್ಷಣವೇ ವೈದ್ಯರಿಗೆ ತೋರಿಸುವುದು ಅಗತ್ಯ.

ಗಡ್ಡೆಗಳು ಮತ್ತು ತೂಕ ನಷ್ಟ
ದೇಹದಲ್ಲಿ ಗಡ್ಡೆಗಳು ಕಾಣಿಸಿಕೊಳ್ಳುವುದು ಅಥವಾ ಉತ್ತಮ ಆಹಾರ ಸೇವಿಸಿದರೂ ತೂಕ ವೇಗವಾಗಿ ಕುಸಿಯುವುದು ಸಹ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ತ್ವರಿತ ತೂಕ ನಷ್ಟವನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಿ ವೈದ್ಯಕೀಯ ಸಲಹೆ ಪಡೆಯಬೇಕು.

ಜೀರ್ಣಕ್ರಿಯೆ ಮತ್ತು ಮಲಬದ್ಧತೆ ಸಮಸ್ಯೆ
ನಿರಂತರ ಮಲಬದ್ಧತೆ ಅಥವಾ ಹೊಟ್ಟೆಯ ತೊಂದರೆಗಳು ಕರುಳಿನ ಕ್ಯಾನ್ಸರ್‌ನ ಪ್ರಾರಂಭಿಕ ಎಚ್ಚರಿಕೆ ಆಗಿರಬಹುದು. ಕೆಲವರಿಗೆ ವಾಕರಿಕೆ ಪದೇ ಪದೇ ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.

ಬಾಯಿ ಮತ್ತು ನಾಲಿಗೆಯ ಬದಲಾವಣೆಗಳು
ನಾಲಿಗೆಯಲ್ಲಿ ಬಿಳಿ ಚುಕ್ಕೆಗಳು ಅಥವಾ ಬಾಯಿಯಲ್ಲಿ ಕೆಂಪು-ಬಿಳಿ ಕಲೆಗಳು ಕಂಡುಬಂದರೆ ಅವನ್ನು ನಿರ್ಲಕ್ಷಿಸಬಾರದು. ಆಗಾಗ ಬಾಯಿ ಹುಣ್ಣಿನಿಂದ ಬಳಲುವುದು ಕೂಡ ಕ್ಯಾನ್ಸರ್‌ನ ಸೂಚನೆ ಆಗುವ ಸಾಧ್ಯತೆ ಇದೆ.
