ಕಾಂಗ್ರೆಸ್‌ಗೆ ಮತ ಹಾಕಿದಲ್ಲಿ ಕಸದ ಬುಟ್ಟಿಗೆ, ಬಿಜೆಪಿಗೆ ಮತ ಹಾಕಿದಲ್ಲಿ ಅದು ಪ್ರಧಾನಿಗೆ: ಗಾಲಿ ಜನಾರ್ಧನ ರೆಡ್ಡಿ

ಹೊಸದಿಗಂತ ವರದಿ,ಚಿತ್ರದುರ್ಗ:

ಕಾಂಗ್ರೆಸ್‌ಗೆ ಮತ ಹಾಕಿದಲ್ಲಿ ನಿಮ್ಮ ಮತ ಕಸದ ಬುಟ್ಟಿ ಸೇರುತ್ತದೆ. ಬಿಜೆಪಿಗೆ ಮತ ನೀಡಿದಲ್ಲಿ ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ ಸೇರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರಿಗೆ ಮತ ನೀಡಿ ಅವರನ್ನು ಪ್ರಚಂಡ ಬಹುಮತಗಳಿಂದ ಗೆಲ್ಲಿಸಬೇಕೆಂದು ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಮನವಿ ಮಾಡಿದರು.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಪಟ್ಟಣದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಇಂಡಿಯಾ ಒಕ್ಕೂಟ ನೂರು ಸ್ಥಾನ ದಾಟಲ್ಲ. ಹಾಗಾಗಿ ಇಂಡಿಯಾ ಒಕ್ಕೂಟಕ್ಕೆ ಮತ ಹಾಕಿದಲ್ಲಿ ನಿಮ್ಮ ಮತ ವ್ಯರ್ಥವಾಗುತ್ತದೆ. ಗೋವಿಂದ ಕಾರಜೋಲ ಅವರಿಗೆ ಮತ ನೀಡಿದಲ್ಲಿ ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೇರುತ್ತದೆ. ಹಾಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡಿ ದೇಶದ ಹಿತರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ ಎಂದರು.

ಇಂತಹ ಮಹಾನ್ ನಾಯಕ ನರೇಂದ್ರ ಮೋದಿಯವರ ಬಗ್ಗೆ ಕಾಂಗ್ರೆಸ್ ಸಚಿವ ಶಿವರಾಜ್ ತಂಗಡಗಿ ಕೀಳಾಗಿ ಮಾತನಾಡುತ್ತಾರೆ. ಈ ರೀತಿ ಮಾತನಾಡಿದ ಸಚಿವ ತಂಗಡಗಿಗೆ ಸಿದ್ದರಾಮಯ್ಯ ಏನೂ ಹೇಳಲಿಲ್ಲ. ಇದು ಕಾಂಗ್ರೇಸ್ ಪಕ್ಷದ ಸಂಸ್ಕೃತಿ. ನಾವು ತಂಗಡಗಿ ಕಪಾಳಕ್ಕೆ ಬಾರಿಸುವುದು ಒಂದು ನಿಮಷದ ಕೆಲಸ. ಆದರೆ ನಮ್ಮ ಸಂಸ್ಕೃತಿ ಅದಲ್ಲ. ಬಿಜೆಪಿಗೆ ಮತ ಹಾಕುವ ಮೂಲಕ ತಂಗಡಗಿ ಕಪಾಳ ಮೋಕ್ಷ ಮಾಡೋಣ ಎಂದ ಅವರು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಚಿತ್ರದುರ್ಗ ಕ್ಷೇತ್ರಕ್ಕೆ ಬಿಜೆಪಿಯಿಂದ ಸುಸಂಸ್ಕೃತ ಅಭ್ಯರ್ಥಿಯನ್ನು ನೀಡಿದ್ದಾರೆ. ದೇಶ ರಕ್ಷಣೆ ಮಾಡುವ ಮೋದಿ ಅವರಿಗೆ ಮತ ಹಾಕಬೇಕಿದೆ. ಅಭಿವೃದ್ಧಿ ಪರ ಚಿಂತನೆ ಮಾಡುವ ನಾಯಕ ಕಾರಜೋಳ. ಕ್ಷೇತ್ರದ ಜನರ ಬವಣೆ ಅರಿತು ಶ್ರಮಿಸುವ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿ ವ್ಯಾಕ್ಸಿನ್ ದೇಶದ ಪ್ರತಿ ಪ್ರಜೆಗೆ ನೀಡಿದ್ದಾರೆ. ಲಸಿಕೆ ಇಲ್ಲದೆ ಹೋಗಿದ್ದರೆ ಇಂದು ನಾವು ಬದುಕಿರುತ್ತಿರಲಿಲ್ಲ. ಹಾಗಾಗಿ ಎಲ್ಲರೂ ಬಿಜೆಪಿಗೆ ಮತ ನೀಡುವ ಮೂಲಕ ಋಣಭಾರ ಕಡಿಮೆ ಮಾಡಿಕೊಳ್ಳಬೇಕಿದೆ ಎಂದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ನಮಗೆ ದೇಶ ಮುಖ್ಯ. ದೇಶದ ರಕ್ಷಣೆ ಮಾಡುವವರು ನಮಗೆ ಬೇಕು. ಚೀನಾ ಮತ್ತು ಪಾಕಿಸ್ತಾನ ನಮ್ಮ ದೇಶದ ಮೇಳೆ ದಾಳಿ ಮಾಡಲು ಹೊಂಚು ಹಾಕುತ್ತಿವೆ. ಹಾಗಾಗಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು. ಕಾಂಗ್ರೆಸ್‌ನವರು ಎಸ್.ಸಿ., ಎಸ್.ಟಿ. ಹಣ ಲಪಟಾಯಿಸಿ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಾರೆ. ಇಂಥವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ, ಇದು ದೇಶಕ್ಕಾಗಿ ನಡೆಯುತ್ತಿರುವ ಐತಿಹಾಸಿಕ ಚುನಾವಣೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಎಂದು ನಡೆಯುವ ಚುನಾವಣೆ. ೧೪೦ ಕೋಟಿ ಜನ ಇದಕ್ಕಾಗಿ ಹಂಬಲಿಸುತ್ತಿದ್ದಾರೆ. ೨೩ ವರ್ಷಗಳಿಂದ ಭ್ರಷ್ಟಾಚಾರ ಆರೋಪ ಇಲ್ಲದ ರಾಜಕಾರಣಿ ಪ್ರಧಾನಿ ಮೋದಿ. ಕಳೆದ ೧೦ ವರ್ಷದಿಂದ ದೇಶದ ಅಭಿವೃದ್ಧಿ ಮಾಡಿದ್ದಾರೆ. ದೇಶದ ಕೀರ್ತಿ ಗೌರವ ಪ್ರಪಂಚದಲ್ಲಿ ಹೆಚ್ಚಿಸಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯವುಳ್ಳ ಯಾವುದೇ ವ್ಯಕ್ತಿ ಇಲ್ಲ. ರಸ್ತೆಯಲ್ಲಿ ಹೋಗುವ ಹುಚ್ಚನೂ ರಾಹುಲ್ ಗಾಂಧಿ ಪ್ರಧಾನಿ ಆಗಲಿ ಎಂದು ಹೇಳಲು ಸಾಧ್ಯವಿಲ್ಲ. ನರೇಂದ್ರ ಮೋದಿ ದೇಶದಲ್ಲಿ ನೂರಾರು ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದುರ್ಗ ಮಧ್ಯ ಕರ್ನಾಟಕ ಹಿಂದುಳಿದ ಜಿಲ್ಲೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ. ನನಗೆ ಮತ ಹಾಕಿದಲ್ಲಿ ನಾನು ಮೋದಿ ಲೈನ್‌ನಲ್ಲಿ ಇರುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದಲ್ಲಿ ಅವರು ವಿರೋಧ ಪಕ್ಷದ ಗುಂಪಿನಲ್ಲಿ ಇರುತ್ತಾರೆ. ಹಾಗಾಗಿ ಎಲ್ಲರೂ ನನ್ನನ್ನು ಬೆಂಬಲಿಸಿ ಅತಿ ಹೆಚ್ಚಿನ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿ.ಪಂ. ಮಾಜಿ ಸದಸ್ಯ ಜಯಪಾಲಯ್ಯ, ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೇಕಾಯಿ ರಾಮದಾಸ್, ರೈತ ಮೋರ್ಚ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಜೆಡಿಎಸ್ ವೀರಭದ್ರಪ್ಪ ಮುದೋಳ ಕ್ಷೇತ್ರದ ಮುಖಂಡರಾದ ಬಸಪ್ಪ ಮಳಲಿ, ರಾಜು, ಮೊಳಕಾಲ್ಮುರು ಮಂಡಲ ಅಧ್ಯಕ್ಷ ಮಂಜುನಾಥ್, ಡಿ.ಓ.ಮುರಾರ್ಜಿ, ಆರ್.ಜಿ.ಗಂಗಾಧರಪ್ಪ, ದೇವಸಮುದ್ರ ಕೋನಾಪುರದ ರಾಮಾಂಜನೇಯ, ಪ್ರಭಾಕರ್, ಲೋಕೇಶ್ ಗೌಡ, ಬೊಮ್ಮದೇವರಹಳ್ಳಿ ತಿಪ್ಪೇಸ್ವಾಮಿ, ರೂಪಾ ವಿನಯಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!