ಭಾರತದ ಸೆಮಿಕಂಡಕ್ಟರ್ ಕನಸಿಗೆ ನೀರೆರೆಯೋಕೆ ಐಐಟಿ ಮದ್ರಾಸ್ ಹೊಸ ಕೋರ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶೀಯವಾಗಿ ಸೆಮಿಕಂಡಕ್ಟರ್‌ ಉತ್ಪಾದನೆ ಹೆಚ್ಚಿಸುವ ಮೂಲಕ ಜಾಗತಿಕವಾಗಿ ʼಸೆಮಿಕಂಡಕ್ಟರ್‌ ಹಬ್‌ʼ ಆಗಿ ಬದಲಾಗ ಹೊರಟಿರೋ ಭಾರತವು ಈ ನಿಟ್ಟಿನಲ್ಲಿ ಅನೇಕ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ದೇಶದ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಪರಿಣಿತರನ್ನು ಹುಟ್ಟುಹಾಕುವ ಗುರಿಯೊಂದಿಗೆ ಐಐಟಿ ಮದ್ರಾಸ್‌ ಎಲೆಕ್ಟ್ರಾನಿಕ್ಸ್‌ ಉತ್ಪಾದನೆ ಕುರಿತಂತೆ ಹೊಸ ಕೋರ್ಸ್‌ ಒಂದನ್ನು ಪ್ರಾರಂಭಿಸಿದ್ದು ಈ ಕೋರ್ಸ್ ವಿಶೇಷವಾಗಿ ಸೆಮಿಕಂಡಕ್ಟರ್‌ ತಯಾರಿಕೆಗೆ ಅಗತ್ಯವಿರುವ ಕೌಶಲ್ಯವನ್ನು ನೀಡಲಿದೆ.‌

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ ವತಿಯಿಂದ ನಾಲ್ಕು ವರ್ಷಗಳ ಆನ್‌ಲೈನ್ ಬ್ಯಾಚುಲರ್ ಆಫ್ ಸೈನ್ಸ್ ಇನ್ ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಈ ಕಾರ್ಯಕ್ರಮವನು ಉದ್ಘಾಟಿಸಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ISM) ಗೆ ಅನುಗುಣವಾಗಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಂಬೆಡೆಡ್ ಉತ್ಪಾದನಾ ಉದ್ಯಮದಲ್ಲಿ ಅರ್ಹ ಪದವೀಧರರನ್ನು ಸೃಷ್ಟಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

12 ತರಗತಿಯಲ್ಲಿ ಗಣಿತ ಹಾಗು ಭೌತಶಾಸ್ತ್ರವನ್ನು ಕಲಿತಿರುವ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಈ ಕೋರ್ಸ್‌ ಗೆ ಸೇರಿಕೊಳ್ಳಬಹುದಾಗಿದೆ. ಎಸ್‌ಸಿ, ಎಸ್‌ಟಿ, ವಿಕಲಚೇತನ ವಿದ್ಯಾರ್ಥಿಗಳಿಗೆ ಅಗತ್ಯ ವಿದ್ಯಾರ್ಥಿವೇತನ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಕೋರ್ಸ್‌ ಗೆ ಪ್ರವೇಶ ಪಡೆಯಲು ಜೆಇಇ (JEE) ಪರೀಕ್ಷೆಯ ಬದಲಾಗಿ ನಾಲ್ಕು ವಾರಗಳ ಆಂತರಿಕ ಅರ್ಹತಾ ಪರೀಕ್ಷೆಯ ನಂತರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನಾಲ್ಕುವಾರಗಳ ಕಾಲ ಐಐಟಿ ಮದ್ರಾಸ್ ಅಧ್ಯಾಪಕರು ಕಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಕಾರ್ಯಕ್ರಮದಿಂದ ಪದವಿ ಪಡೆದ ವಿದ್ಯಾರ್ಥಿಗಳು ಆಟೋಮೋಟಿವ್, ಸೆಮಿಕಂಡಕ್ಟರ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿದೆ. ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನರ್, ಎಂಬೆಡೆಡ್ ಸಿಸ್ಟಮ್ ಡೆವಲಪರ್, ಎಲೆಕ್ಟ್ರಾನಿಕ್ ಹಾರ್ಡ್‌ವೇರ್ ಸ್ಪೆಷಲಿಸ್ಟ್, ಸಿಸ್ಟಮ್ ಟೆಸ್ಟಿಂಗ್ ಇಂಜಿನಿಯರ್, ಎಲೆಕ್ಟ್ರಾನಿಕ್ಸ್ ಸಂಶೋಧನಾ ಇಂಜಿನಿಯರ್ ಎಂಬ ವಿಷಯಗಳು ಲಭ್ಯವಿದ್ದು ವಿದ್ಯಾರ್ಥಿಗಳು ತಮಗಿಷ್ಟದ ವಿಷಯವನ್ನು ಆಯ್ದುಕೊಳ್ಳಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!