Thursday, March 30, 2023

Latest Posts

ಹೋಳಿ: ಇಲ್ಲಿ ಬಣ್ಣದೋಕುಳಿ ಅಲ್ಲ, ಬೂದಿಯದ್ದು!

ಸಂತೋಷ ರಾಯ್ಕರ

ಮುಂಡಗೋಡ ತಾಲೂಕಿನ ವಿವಿಧೆಡೆ ಗೌಳಿ ಜನಾಂಗದವರ ವಿಶಿಷ್ಟ ರೀತಿಯ ಹೋಳಿ ಆಚರಣೆ ಆರಂಭವಾಗಿದೆ.
ಗೌಳಿ ಸಮುದಾಯದವರು ಸಂಪ್ರದಾಯದಂತೆ ಹೋಳಿ ಹಬ್ಬದಂದು ಬಣ್ಣದ ಓಕುಳಿಯಾಡುವುದಿಲ್ಲ. ಬದಲಿಗೆ ಸುಟ್ಟ ಒಣ ಸಗಣಿಯ ಬೂದಿಯನ್ನು ಪರಸ್ಪರ ಪ್ರೀತಿಯಿಂದ ಹಚ್ಚಿಕೊಳ್ಳುತ್ತೇವೆ ಎಂದು ಬ್ಯಾನಳ್ಳಿ ಗ್ರಾಮದ ನಿವಾಸಿ ಗೌಳಿಯುವಕ ಬಾಗು ಕಾತ್ರೋಟ್ ಹೇಳುತ್ತಾರೆ.

ಹೋಳಿ ಹುಣ್ಣಿಮೆ ರಾತ್ರಿಯಂದು ಇವರ ಕಾಮ ದಹನದ ಪದ್ಧತಿಯೆಂದರೆ ಹೊಳೋಬಾ, ಎರಡು ಕಲ್ಲಿನ ದೇವರ ಸುತ್ತ ಎಲ್ಲರ ಮನೆಯಿಂದ ಒಣ ಸಗಣಿ ತಂದು ಹಾಕಿ ಸುತ್ತ ಇಟ್ಟು ಸುಡುತ್ತಾರೆ. ಗ್ರಾಮದ ಪ್ರತಿಯೊಬ್ಬರ ಮನೆಯಿಂದಲೂ ಸಗಣಿ ತರಲೇಬೇಕು ಎಂಬ ನಿಯಮವಿದೆ. ನಂತರ ಸುಟ್ಟ ಬೂದಿಯನ್ನು ಎಲ್ಲರೂ ಹಚ್ಚಿಕೊಳ್ಳುತ್ತಾರೆ. ಮರಾಠಿ ಭಾಷೆಯ ಹಾಡಿನೊಂದಿಗೆ ತಾಳ ಹಾಕುತ್ತಾ ಕೈಯಲ್ಲಿ ವಾದ್ಯ ಹಿಡಿದು ಸುಗ್ಗಿ ಕುಣಿತ ಮಾಡುತ್ತಾರೆ.

ಮಾರನೆಯ ದಿವಸ ಬೆಳಗ್ಗೆ ಪ್ರತಿಯೊಬ್ಬರ ಮನೆಯಿಂದ ತಾಮ್ರದ ಕೊಡದಲ್ಲಿ ನೀರು ತಂದು ಹೊಳೋಬಾ ದೇವರ ಸುತ್ತ ಇಟ್ಟು ಪೂಜೆ ಮಾಡಿ ಆ ನೀರನ್ನು ಸುಟ್ಟ ಬೂದಿಯ ಮೇಲೆ ಸುರಿಯುತ್ತಾರೆ.

ದೇವರಿಗೆ ಬೆಣ್ಣೆ, ತುಪ್ಪ, ಭಂಡಾರ ಹಚ್ಚಿಪೂಜೆ ಮಾಡಿ ಮತ್ತೆ ಕುಣಿಯುತ್ತಾರೆ. ಸಂಜೆ ವೇಳೆ ರಂಗುರಂಗಿನ ಬಟ್ಟೆಗಳನ್ನು ಧರಿಸಿ ಕನ್ನಡಕ, ಕೊರಳಿಗೆ ಮುತ್ತಿನ ಹಾರಗಳನ್ನು ಹಾಕಿಕೊಂಡು, ಗೆಜ್ಜೆಗಳನ್ನು ಕಟ್ಟಿಕೊಂಡು ಹಾಗೂ ಪೇಟ ಸುತ್ತಿ ಕೊಂಡು ಒಂದು ಗ್ರಾಮದಿಂದ 8-10 ಜನರ ಒಂದು ತಂಡದಂತೆ ಅಕ್ಕ-ಪಕ್ಕದ ಊರುಗಳಿಗೆ ಸುಗ್ಗಿ ಕುಣಿತಕ್ಕೆ ಹೋಗುತ್ತಾರೆ. ದೇವರ ಹೆಸರಲ್ಲಿ ಕಾಣಿಕೆ ಪಡೆಯುತ್ತಾರೆ. ಈ ರೀತಿಯಾಗಿ ಐದು ದಿನಗಳ ಕಾಲ ಹೋಳಿ ಆಚರಣೆ ಮಾಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!