ಹೊಸದಿಗಂತ ವರದಿ,ಶಿವಮೊಗ್ಗ:
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ವೊಬೈಲ್ ಮತ್ತು ಗಾಂಜಾ ಲಭ್ಯವಾಗುತ್ತಿವೆ. ಇವು ಹೇಗೆ ಸಿಗುತ್ತಿವೆ ಎಂಬುದರ ಬಗ್ಗೆ ತನಿಖೆ ನಡೆಸಿ ಬಿಗಿ ಕ್ರಮ ಕೈಗೊಳ್ಳಲಾಗುವುದು. ಜೈಲಿನಲ್ಲಿ ಜಾಮರ್ ಅಳವಡಿಕೆ ಬಗ್ಗೆ ಯೋಜಿಸಲಾಗಿದೆ. ಈಗ ಬಂದಿರುವ ವಿಡಿಯೋಗಳು ಹಳೆಯವು ಎಂಬ ಮಾಹಿತಿ ಇದೆ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ ಎಂದರು.
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮವಿಲ್ಲ
ಸಬ್‌ಇನ್ಸ್‌ಪೆಕ್ಟರ್ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ. 450 ಹುದ್ದೆಗೆ 1 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 450 ಮಂದಿ ಆಯ್ಕೆ ಆಗಿದ್ದಾರೆ. ಹಾಗಾಗಿ ಅಸಹನೆ ಇದ್ದೇ ಇರುತ್ತದೆ. ಪರೀಕ್ಷೆಯಲ್ಲಿ ಬ್ಲೂಟೂತ್ ಸೇರಿದಂತೆ ಅಕ್ರಮ ನಡೆಸಲು ಯತ್ನಿಸಿದವರನ್ನು ಜೈಲಿಗೆ ಕಳಿಸಲಾಗಿದೆ ಎಂದರು.