Friday, August 19, 2022

Latest Posts

ಸ್ಮೃತಿ ಇರಾನಿ ಪುತ್ರಿ ವಿರುದ್ಧ ಅಕ್ರಮ ಬಾರ್ ಆರೋಪ: ಕಾಂಗ್ರೆಸ್ ಗೆ ಖಡಕ್ ತಿರುಗೇಟು ನೀಡಿದ ಕೇಂದ್ರ ಸಚಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಗೋವಾದಲ್ಲಿ ಅಕ್ರಮವಾಗಿ ಬಾರ್​ ನಡೆಸುತ್ತಿದ್ದಾರೆಂದು ಕಾಂಗ್ರೆಸ್ ಆರೋಪಕ್ಕೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

ತಮ್ಮ ಮಗಳ ವಿರುದ್ಧ ಕೇಳಿ ಬಂದಿರುವ ಆರೋಪವನ್ನ ಸಚಿವೆ ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಜೊತೆಗೆ ಕೋರ್ಟ್ ಮೂಲಕ ಇದಕ್ಕೆ ಉತ್ತರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಸೋನಿಯಾ ಹಾಗೂ ರಾಹುಲ್​ ಗಾಂಧಿ ವಿರುದ್ಧ ನಾನು ವಾಗ್ದಾಳಿ ನಡೆಸುತ್ತಿರುವ ಕಾರಣ ನನ್ನ ಮೇಲೆ ಇಂತಹ ಆರೋಪ ಮಾಡಲಾಗಿದೆ. ಕಾಂಗ್ರೆಸ್​​ ಆರೋಪದಲ್ಲಿ ಯಾವುದೇ ರೀತಿಯ ಹುರುಳಿಲ್ಲ . ಕೇವಲ 18 ವರ್ಷದ ಅಮಾಯಕ ಮಗಳ ಮೇಲೆ ಇಂತಹ ಆರೋಪ ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದಕ್ಕೆ ಕೋರ್ಟ್ ಮೂಲಕ ಉತ್ತರ ನೀಡಲಾಗುವುದು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ 5,000 ಕೋಟಿ ರೂ. ಕಾಂಗ್ರೆಸ್ ಬಳಕೆ ಮಾಡಿಕೊಂಡಿದೆ. ಇದರಲ್ಲಿ ಸೋನಿಯಾ, ರಾಹುಲ್​ ಕೈವಾಡವಿದೆ. ಇದರ ಬಗ್ಗೆ ನಾನು ಮಾತನಾಡಿದ್ದಕ್ಕಾಗಿ ಇದೀಗ ನನ್ನ ಮಗಳ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. 18 ವರ್ಷದ ಮಗಳು ಮೊದಲ ವರ್ಷದ ಕಾಲೇಜು ವಿದ್ಯಾರ್ಥಿನಿಯಾಗಿದ್ದು,ಯಾವುದೇ ಬಾರ್​ ಹೊಂದಿಲ್ಲ ಎಂದಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ವಿರುದ್ಧ ಹೋರಾಡಿ ಗೆದ್ದಿರುವೆ. ಇದೀಗ 2024ರಲ್ಲಿ ಮತ್ತೊಮ್ಮೆ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ. ಧೈರ್ಯವಿದ್ದರೆ ರಾಹುಲ್ ಗಾಂಧಿ ಸ್ಪರ್ಧೆ ಮಾಡಲಿ ಎಂದು ಸವಾಲು ಕೂಡಾ ಹಾಕಿದ್ದಾರೆ.

ಇನ್ನು ಕಾಂಗ್ರೆಸ್‌ ಆರೋಪದ ಬಗ್ಗೆ ಕೇಂದ್ರ ಸಚಿವೆಯ ಪುತ್ರಿ ಝೋಯಿಷ್‌ ಇರಾನಿ ಪರ ವಕೀಲ ಕೀರತ್‌ ನಾಗ್ರಾ ಪ್ರತಿಕ್ರಿಯೆ ನೀಡಿದ್ದು, ನನ್ನ ಕಕ್ಷಿದಾರೆ ‘ಸಿಲ್ಲಿ ಸೋಲ್ಸ್‌ ಗೋವಾ’ ಎಂಬ ಯಾವುದೇ ರೆಸ್ಟೋರೆಂಟ್‌ನ ಮಾಲೀಕರಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಹಾಗೆ ಯಾವುದೇ ಶೋಕಾಸ್‌ ನೋಟಿಸ್‌ ಸಹ ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸ್ಮೃತಿ ಇರಾನಿ ಅವರ ವಿರುದ್ಧ ಮಾಡಿರುವ ರಾಜಕೀಯ ಪ್ರೇರಿತ ಆರೋಪವಿದು ಎಂದಿದ್ದರು.

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ್ದ ಕಾಂಗ್ರೆಸ್ ಮುಖಂಡ ಜೈರಾಮ್​ ರಮೇಶ್, ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಬಾರ್ ನಡೆಸುತ್ತಿದ್ದು, ಅದಕ್ಕೆ ನಕಲಿ ಪರವಾನಗಿ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಕೇಂದ್ರ ಸಚಿವೆ ಸ್ಥಾನದಿಂದ ಅವರನ್ನ ವಜಾಗೊಳಿಸುವಂತೆ ಒತ್ತಾಯಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!