ಹೊಸದಿಗಂತ ಡಿಜಿಟಲ್ ಡೆಸ್ಕ್
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು 34 ನೇ ನೆಕ್ಕಿಲಾಡಿ ಗ್ರಾಮದಲ್ಲಿನ ಕೃಷಿ ತೋಟದಲ್ಲಿ ಅಕ್ರಮವಾಗಿ ಜಾನುವಾರು ಕಸಾಯಿ ಮಾಡುತ್ತಿದ್ದ ಪ್ರಕರಣ ಪತ್ತೆಹಚ್ಚಿರುವ ಉಪ್ಪಿನಂಗಡಿ ಠಾಣೆ ಪೊಲೀಸರು ಈ ಸಂಬಂಧ ದನದ 96 ಕೆ.ಜಿ ಮಾಂಸ ಹಾಗೂ ಕೃತ್ಯಕ್ಕೆ ಬಳಸಲಾದ ಪರಿಕರಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಇಲ್ಲಿನ ಆದರ್ಶ ನಗರದ ಕಜೆ ಎಂಬಲ್ಲಿನ ಖತೀಜಮ್ಮ ಎಂಬವರಿಗೆ ಸೇರಿದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಜಾನುವಾರು ಕಡಿದು ಮಾಂಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಬಂದ ಮಾಹಿತಿ ಮೇರೆಗೆ, ಉಪ್ಪಿನಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕ ಅವಿನಾಶ್ ಹೆಚ್, ಠಾಣಾ ಸಿಬ್ಬಂದಿಗಳೊಂದಿಗೆ ಈ ದಾಳಿ ನಡೆಸಿದ್ದರು.
ಈ ಸಂದರ್ಭ ಕೃತ್ಯದಲ್ಲಿ ತೊಡಗಿದ್ದ ಆರೋಪಿಗಳಾದ ರಫಿಕ್, ನಝೀರ್, ಉಬೈದ್, ಅಶ್ರಫ್ ಹಾಗೂ ನಿಜಾಮುದ್ದೀನ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳದಲ್ಲಿದ್ದ ಸುಮಾರು 24 ಸಾವಿರ ರೂ. ಮೌಲ್ಯದ 96 ಕೆ.ಜಿ ದನದ ಮಾಂಸ, ದೇಹದ ಅಂಗಾಂಗಗಳು, ಮಾಂಸ ಮಾಡಲು ಬಳಸಿದ ಚೂರಿಗಳು, ಕಬ್ಬಿಣದ ಎಲೆಕ್ಟ್ರೋನಿಕ್ ತೂಕ ಮಾಪನ ಹಾಗು ಇತರ ಸೊತ್ತುಗಳು, 2 ಅಟೋರಿಕ್ಷಾಗಳು, 1 ಮೋಟಾರ್ ಸೈಕಲ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.