ಹೊಸದಿಗಂತ ಅಂಕೋಲಾ:
ತಾಲೂಕಿನ ಬಾಳೆಗುಳಿ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಅಂಕೋಲಾ ಪೊಲೀಸರು ಲಾರಿ ಸಮೇತ ವಶಕ್ಕೆ ಪಡೆದಿದ್ದಾರೆ.
ಕೆ.ಎ 43-5817 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಒಂಬತ್ತು ಎಮ್ಮೆಗಳು, ನಾಲ್ಕು ಕೋಣಗಳು ಹಾಗೂ ಎರಡು ಎತ್ತುಗಳು ಸೇರಿ ಒಟ್ಟು 15 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿ ಸಾಗುತ್ತಿದ್ದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತ ಇನ್ನೊಂದು ಲಾರಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದರಿಂದ ಜಾನುವಾರುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಲಾರಿ ಚಾಲಕ ಲಾರಿಯನ್ನು ಬಿಟ್ಟು ಓಡಿ ಹೋಗಿದ್ದು ಜಾನುವಾರುಗಳನ್ನು ರಕ್ಷಿಸಿ ಅಂಕೋಲಾ ಪೊಲೀಸ್ ವಸತಿ ಗೃಹದ ಆವರಣದಲ್ಲಿ ಇಡಲಾಗಿದೆ. ತಾಲೂಕಿನಲ್ಲಿ ಗೋವುಗಳ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಜಾನುವಾರುಗಳು ಕಸಾಯಿ ಖಾನೆಗೆ ಸಾಗುವುದು ತಪ್ಪಿದಂತಾಗಿದ್ದು ತಾಲೂಕಿನ ಕೆಲವು ಗೋವು ರಕ್ಷಕರು ಆಗಮಿಸಿ ಹಸಿದ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಗಳೂರು, ಕೇರಳ ಭಾಗಗಳಿಗೆ ಜಾನುವಾರುಗಳ ಸಾಗಾಟ ಹೆಚ್ಚಿದ್ದು
ದೊಡ್ಡ ದೊಡ್ಡ ಲಾರಿಗಳಲ್ಲಿ ಜಾನುವಾರುಗಳನ್ನು ತುಂಬಿ ಸಾಗಿಸುವ ಜಾಲ ಕೆಲಸ ಮಾಡುತ್ತಿದೆ.
ಲಾರಿ ಅಪಘಾತಕ್ಕೀಡಾಗದೇ ಇದ್ದರೆ ಯಾವುದೇ ಅಡೆತಡೆ ಇಲ್ಲದೇ ಜಾನುವಾರುಗಳು ಕಸಾಯಿ ಖಾನೆಗೆ ತಲುಪುತ್ತಿದ್ದವು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜಾನುವಾರುಗಳನ್ನು ಸಾಗಿಸುತ್ತಿರುವ ಲಾರಿಗೆ ಸರಿಯಾಗಿ ನಂಬರ್ ಪ್ಲೇಟ್ ಕಾಣದಂತೆ ವ್ಯವಸ್ಥೆ ಮಾಡಲಾಗಿದ್ದು ಸಹ ಅಕ್ರಮ ಗೋವುಗಳ ಸಾಗಾಟಗಾರರ ಯೋಜನೆ ಇರಬಹುದು ಎನ್ನಲಾಗುತ್ತಿದೆ.
ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿ ಕುರಿತು ಸೂಕ್ತ ತನಿಖೆ ನಡೆಸಿದರೆ ಜಾನುವಾರುಗಳ ಸಾಗಾಟ ಜಾಲದ ಕುರಿತು ಸಾಕಷ್ಟು ವಿಚಾರಗಳು ಹೊರ ಬರುವ ಸಾಧ್ಯತೆ ಇದೆ.