ದೇವರ ಕಾಡಿನಲ್ಲಿ ಅಕ್ರಮ ಬೇಟೆ: ನಾಲ್ವರ ಬಂಧನ

ಹೊಸದಿಗಂತ ವರದಿ, ಮಡಿಕೇರಿ:

ದೇವರ ಕಾಡಿಗೆ ಅಕ್ರಮ ಪ್ರವೇಶ ಮಾಡಿ ಎರಡಿ ಹೆಣ್ಣು ಕಾಡು ಕುರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣ ಮೂರ್ನಾಡು ಸಮೀಪದ ಮುತ್ತಾರ್‍ಮುಡಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ 4 ಮಂದಿ ಆರೋಪಿಗಳನ್ನು ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಕಾಫಿ ಕೆಲಸಕ್ಕಾಗಿ ಮುತ್ತಾರ್‍ಮುಡಿಗೆ ಬಂದಿರುವ ತಮಿಳುನಾಡಿನ ಸೇಲಂ ಜಿಲ್ಲೆ ಅತ್ತೂರು ನಿವಾಸಿಗಳಾದ ಜಯರಾಮ್, ಮಥಾಯಂ, ಅಶೋಕ್ ಮತ್ತು ಮುತ್ತಾರ್‍ಮುಡಿ ಗ್ರಾಮ ನಿವಾಸಿ ತಮ್ಮಯ್ಯ ಎಂಬವರೇ ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆ ಹಿನ್ನೆಲೆ: ಶನಿವಾರ ರಾತ್ರಿ ಮಡಿಕೇರಿ ವಲಯಕ್ಕೆ ಸೇರಿದ ಮುತ್ತಾರ್‍ಮುಡಿ ಗ್ರಾಮದ ಭದ್ರಕಾಳಿ ದೇವರ ಕಾಡಿಗೆ ತಂಡವೊಂದು ಬೇಟೆಗೆ ತೆರಳಿರುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮಡಿಕೇರಿ ವಿಭಾಗದ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ 3 ಮಂದಿ ಬೇಟೆಗಾರರನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಸಂದರ್ಭ ಅಲ್ಲಿನ ನಿವಾಸಿ ತಮ್ಮಯ್ಯ ಎಂಬವರ ಬಂದೂಕು ಬಳಸಿ ಎರಡು ಹೆಣ್ಣು ಕಾಡುಕುರಿಗಳನ್ನು ಬೇಟೆಯಾಡಿರುವುದಾಗಿ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿ ಬೇಟೆಗೆ ಬಂದೂಕು ನೀಡಿದ ಆರೋಪದಲ್ಲಿ ತಮ್ಮಯ್ಯ ಅವರನ್ನು ಭಾನುವಾರ ಬೆಳಗ್ಗೆ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಗಳ ಬಳಿಯಿಂದ ಕೃತ್ಯಕ್ಕೆ ಬಳಸಿದ್ದ ಒಂಟಿ ನಳಿಗೆಯ ಒಂದು ಕೋವಿ, ಬಳಕೆಯಾಗಿರುವ ಒಂದು ಕಾಡತೂಸು ಮತ್ತು 2 ಹೆಣ್ಣು ಕಾಡು ಕುರಿಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ 4 ಮಂದಿ ಆರೋಪಿಗಳ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!