ಅಂಬೇಡ್ಕರ್‌ರಿಗೆ ಅತಿ ಹೆಚ್ಚು ನೋವುಂಟು ಮಾಡಿದ್ದು ಕಾಂಗ್ರೆಸ್ ಪಕ್ಷ: ನಳಿನ್ ಕುಮಾರ್ ಕಟೀಲ್

ಹೊಸದಿಗಂತ ವರದಿ, ಮೈಸೂರು:

ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅತಿ ಹೆಚ್ಚು ನೋವುಂಟು ಮಾಡಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ ಆ ಪಕ್ಷವೇ ದಲಿತರ, ಸಂವಿಧಾನ, ಅಂಬೇಡ್ಕರ್ ವಿರೋಧಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಮೈಸೂರಿನ ಲಲಿತಮಹಲ್ ಹೊಟೇಲ್‌ನಲ್ಲಿ ಭಾನುವಾರ ನಡೆದ ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಪೋಟೋ ಇಟ್ಟು ಕೊಂಡು ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬರುತ್ತಿದೆ. ಆದರೆ ಇದೇ ಕಾಂಗ್ರೆಸ್ ಪಕ್ಷ ಎರಡು ಬಾರಿ ಅಂಬೇಡ್ಕರ್‌ರನ್ನು ಚುನಾವಣೆಯಲ್ಲಿ ಸೋಲಿಸಿ, ಅವರು ಸಂಸತ್ ಪ್ರವೇಶಿಸದಂತೆ ತಡೆಯಿತು. ಅಲ್ಲದೇ ಅಂಬೇಡ್ಕರ್ ಅವರು ನಿಧನರಾದಾಗ, ಅವರ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಬಹಳ ನೋವು, ಹಿಂಸೆಯನ್ನು ಕಾಂಗ್ರೆಸ್ ಪಕ್ಷ ನೀಡಿತು. ಈ ಪಕ್ಷದವರಿಗೆ ಅಂಬೇಡ್ಕರ್ ಹೆಸರೇಳುವುದಕ್ಕೆ, ಅವರ ಪೋಟೋವನ್ನು ಇಟ್ಟುಕೊಂಡು ರಾಜಕಾರಣ ಮಾಡುವುದಕ್ಕೆ ಯಾವ ನೈತಿಕತೆಯಿದೆ ಎಂದು ಕಿಡಿಕಾರಿದರು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪಕ್ಷವೇ ಶಾಪವಾಗಿತ್ತು. ಆದರೆ ಈಗ ಕಾಂಗ್ರೆಸ್‌ನ ಕುತಂತ್ರ ಬುದ್ಧಿ ಬಯಲಾಗಿರುವುದರಿಂದ ಅಂಬೇಡ್ಕರ್ ಅವರೇ ಕಾಂಗ್ರೆಸ್‌ಗೆ ಶಾಪವಾಗುತ್ತಿದ್ದಾರೆ ಎಂದರು.

ನಾನು ಹಳ್ಳಿಗಾಡು ಪ್ರದೇಶದಿಂದ ಸಂಸತ್‌ಗೆ ಬಂದವನು. ಪ್ರಧಾನಿ ನರೇಂದ್ರಮೋದಿ ಅವರು ಕೂಟ ಬಡ ಹಿಂದುಳಿದ ಕುಟುಂಬದಿoದ ಬಂದವರು. ನಾವೆಲ್ಲರೂ ಈಗ ಉನ್ನತವಾದ ಅಧಿಕಾರದಲ್ಲಿದ್ದೇವೆ ಎಂದರೆ, ಅದಕ್ಕೆ ಕಾರಣ ಅಂಬೇಡ್ಕರ್ ಅವರು ನೀಡಿದ ಸಂವಿಧಾನ. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗುವುದಕ್ಕೆ ಅಂಬೇಡ್ಕರ್ ಅವರು ನೀಡಿರುವ ದೊಡ್ಡ ಕೊಡುಗೆಯೇ ಕಾರಣವಾಗಿದೆ. ಹಾಗಾಗಿ ಪ್ರಧಾನಿ ಮೋದಿ ಅವರು, ಅಂಬೇಡ್ಕರ್ ಅವರ ಪಂಚ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವವನ್ನು ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು. ಮೈಸೂರು ಸಮಗ್ರ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅದೇ ಮಾದರಿಯಲ್ಲಿ ಮುನ್ನಡೆಯುತ್ತಿರುವ ಮತ್ತು ದೇಶವನ್ನು ಸರ್ವತೋಮುಖ ಅಭಿವೃದ್ಧಿಯಲ್ಲಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ಹುದ್ದೆ ಸಿಗಲು ಡಾ. ಅಂಬೇಡ್ಕರ್ ಅವರೇ ಕಾರಣ ಎಂದು ವಿಶ್ಲೇಷಿಸಿದರು.

ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಬಿಜೆಪಿ ಎಸ್ಸಿ ಮೋರ್ಚಾದ ರಾಷ್ಟ್ರಿಯ ಕಾರ‍್ಯಕಾರಣಿ ನಡೆದಿರುವುದು ದೊಡ್ಡ ಪ್ರೇರಕ ಶಕ್ತಿಯಾಗಿದೆ. ರಾಜ್ಯ ಸರ್ಕಾರ ಎಸ್ಸಿ, ಎಸ್ಟಿ ಸಮುದಾಯದವರಿಗೆ ಮೀಸಲಾತಿಯನ್ನು ಹೆಚ್ಚಳ ಮಾಡಿದೆ. ಅಲ್ಲದೇ ಈ ಸಮುದಾಯಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷಲಾಲ್ ಸಿಂಗ್ ಆರ್ಯ ವಹಿಸಿದ್ದರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹಾಂತ ಶಂಭುನಾಥ್ ಟುಂಡೈ, ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಬಿಜೆಪಿ ಮೈಸೂರು ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!