ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣ: ಸಿಬಿಐ, ಎನ್‍ಐಎ ತನಿಖೆಗೆ ಸುರೇಶ್ ಕುಮಾರ್ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಬ್ಬಾಳದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣವನ್ನು ಸಿಬಿಐ ಅಥವಾ ಎನ್‍ಐಎ ತನಿಖೆ ಮಾಡಬೇಕೆಂದು ರಾಜ್ಯದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʻಜಗನ್ನಾಥ ಭವನʼದಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‍ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್‍ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ʻಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ, ಸಮಾಜದ ಅಳಿವು ಉಳಿವಿನ ಪ್ರಶ್ನೆʼ ಎಂದರು.

ಜನ್ಮ ದೃಢೀಕರಣ ಪತ್ರವನ್ನೂ ನೀಡದೆ ಆಧಾರ್ ಕಾರ್ಡ್ ಮಾಡಲಾಗಿದೆ ಎಂದರೆ ಇವರ ಅಟ್ಟಹಾಸ, ಅಹಂಕಾರ ಎಷ್ಟಿರಬೇಕು? ಎಂದು ಖಾರವಾಗಿ ಪ್ರಶ್ನಿಸಿದರು. ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ. ಆಧಾರ್ ಕಾರ್ಡ್, ನಕಲಿ ಮತದಾರರ ಚೀಟಿ ಜಾಲದ ವ್ಯಾಪ್ತಿಯ ವಿಚಾರಣೆ ಆಗಬೇಕಿದ್ದು, ಎನ್‍ಐಎ ಅಥವಾ ಸಿಬಿಐಗೆ ಒಪ್ಪಿಸಲು ಮನವಿ ಮಾಡುವುದಾಗಿ ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಮ್ಮ ಗಾಂಭೀರ್ಯತೆ ತೋರಿಸಲಿ. ಬೈರತಿ ಸುರೇಶ್ ವಿಚಾರಣೆಯೂ ನಡೆಸುವಂತೆ ಆಗ್ರಹಿಸಿದರು.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 420 ಸೇರಿ ಹಲವು ಸೆಕ್ಷನ್‍ಗಳಡಿ ಎಫ್‍ಐಆರ್ ದಾಖಲಾಗಿದೆ. ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್ ಅಪರಾಧ. ಆರೋಪಿಗಳು ಶಾಸಕ- ಸಚಿವ ಬೈರತಿ ಸುರೇಶ್ ನಿಕಟವರ್ತಿ ಎಂದು ಆರೋಪಿಸಿದರು. ಮೌನೇಶ್ ಸ್ಕೂಟರ್ ರೈಡ್ ಮಾಡುತ್ತಿದ್ದು, ಬೈರತಿ ಸುರೇಶ್ ಅವರು ಹಿಂದೆ ಕುಳಿತ ಫೋಟೋವನ್ನು ಈ ಸಂದರ್ಭದಲ್ಲಿ ಬಹಿರಂಗಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!