Friday, October 7, 2022

Latest Posts

ಅಕ್ರಮ ಕಡವೆ ಕೊಂಬು, ಜಂಗ್ಲಿ ಕಟ್ಟಿಗೆ ಸಾಗಾಟ: ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಕುಮಟಾ:

ಬಾಳೆಕೊನೆ ಸಾಗಿಸುವ ವಾಹನದಲ್ಲಿ ಅಕ್ರಮವಾಗಿ ಕಡವೆ ಕೊಂಬುಗಳು ಹಾಗೂ ಜಂಗ್ಲಿ ಜಾತಿಯ ಕಟ್ಟಿಗೆ ಸಾಗಿಸುವಾಗ ಕತಗಾಲ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ನೇತ್ರತ್ವದ ತಂಡವು ವಾಹನ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಬುಧವಾರ ಮುಂಜಾನೆ ಕತಗಾಲ ವಲಯ ವ್ಯಾಪ್ತಿಯಲ್ಲಿ ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕುಮಾರ ನಿರ್ದೇಶನದಲ್ಲಿ ಕುಮಟಾ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗುರುದತ್ ಶೇಟ್ ಮಾರ್ಗದರ್ಶನದಲ್ಲಿ ಕತಗಾಲ ವಲಯ ಅರಣ್ಯಾಧಿಕಾರಿ ದೀಪಕ ನಾಯ್ಕ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಮಂಗಳವಾರ ತಡ ರಾತ್ರಿ ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಬುಧವಾರ ಮುಂಜಾನೆ ದಾಳಿ ನಡೆಸಿ, ವಾಹನ ಸಹಿತ ಮಾಲು ವಶಪಡಿಸಿಕೊಂಡಿದ್ದಾರೆ. ವಾಹನ ಸಂಖ್ಯೆ ಕೆ.ಎ. ೨೫ ಎಬಿ ೩೯೫೩ ಮಿನಿ ಅಶೋಕ್ ಲೈಲ್ಯಾಂಡ್ ಬಾಳೆಕೊನೆಗಳನ್ನು ಸಾಗಿಸುವ ವಾಹನದಲ್ಲಿ ಅನಧಿಕೃತವಾಗಿ ೪ ಕಡವೆ ಕೊಂಬು, ಜಂಗ್ಲಿ ಜಾತಿಯ ಕೊರೆದು ಪ್ಲೇನಿಂಗ್ ಮಾಡಿದ ೦.೮೩೬ ಘ.ಮೀ. ಜಂಗ್ಲಿ ಚಿರಾವು, ಸುಮಾರು ೮ ಕ್ವಿಂಟಲ್ ಬಾಳೆಕೊನೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಾಹನ ಚಾಲಕ ಶಿರಸಿಯ ಕಸ್ತೂರಿಬಾ ನಗರ ನಿವಾಸಿ ಮಹಮ್ಮದ್ ಅಸ್ಲಾಂ ಬಾಬಾಜಾನ್ ಕರ್ಕಿಮಕ್ಕಿ(೪೨) ಹಾಗೂ ಶಿರಸಿಯ ಅಂಜೂ ಫರ್ನಿಚರ್ ಮಾಲಿಕ ಅಂಥೋನ್ ಬಿ ನರೋನಾ(೬೮) ಇವರನ್ನು ಬಂಧಿಸಿ ವನ್ಯಜೀವಿ ಹಾಗೂ ಅರಣ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿತ ಆರೋಪಿಗಳನ್ನು ಕುಮಟಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಚರಣೆಯಲ್ಲಿ ಬಿ.ಎನ್.ಬಂಕಾಪುರ ಉಪವಲಯ ಅರಣ್ಯಾಧಿಕಾರಿ, ಕತಗಾಲ, ಅರಣ್ಯ ರಕ್ಷಕರಾದ ಮಹೇಶ ಹವಳೆಮ್ಮನವರ್, ಗಣೇಶ ನಾಯಕ, ಸದಾಶಿವ ಪುರಾಣಿಕ್, ವಾಹನ ಚಾಲಕ ವಸಂತ ನಾಯ್ಕ, ಇಲಾಖಾ ಸಿಬ್ಬಂದಿಗಳಾದ ನಾಗೇಶ ಪಟಗಾರ, ಶಂಕರ ಗೌಡ, ಕಿರಣ ನಾಯ್ಕ ಇತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!