ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಆಕ್ರಮಣಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಸಹಾಯವಾಗುವಂತೆ ಉಕ್ರೇನ್ ಗೆ 140 ಕೋಟಿ ಡಾಲರ್ ನೀಡಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯ ಕಾರ್ಯನಿರ್ವಾಹಕ ಮಂಡಲಿ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಐಎಂಎಫ್ ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿಲಿನಾ ಜಾರ್ಜಿವಾ, ಕಳೆದ ವರ್ಷ ಉಕ್ರೇನ್ ಗೆ 270 ಕೋಟಿ ಡಾಲರ್ ತುರ್ತು ಮೀಸಲು ಹಣ ನೀಡಲಾಗಿತ್ತು. ಇದೀಗ ಉಕ್ರೇನ್ ನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆರ್ಥಿಕ ಬಿಕ್ಕಟ್ಟು ನಿವಾರಿಸಲು ಬೆಂಬಲ ನೀಡಲು ಐಎಂಎಫ್ ಸಜ್ಜಾಗಿದೆ ಎಂದರು.
ಈಗಾಗಲೇ ಉಕ್ರೇನ್ ನ ನೆರೆ ರಾಷ್ಟ್ರಗಳು ಹಾಗೂ ಮಿತ್ರರಾಷ್ಟ್ರಗಳು ಅಗತ್ಯ ಆಹಾರ ಸಾಮಾಗ್ರಿ, ಶಸ್ತ್ರಾಸ್ತ್ರಗಳ ನೆರವನ್ನು ನೀಡುತ್ತಿವೆ. ವಿಶ್ವ ಬ್ಯಾಂಕ್ ಕೂಡ ಉಕ್ರೇನ್ ಗೆ 3 ಮಿಲಿಯನ್ ಡಾಲರ್ ನೆರವು ನೀಡಲು ಮುಂದಾಗಿದೆ. ಈ ಮೂಲಕ ಉಕ್ರೇನ್ ಗೆ ರಷ್ಯಾ ವಿರುದ್ಧ ಹೋರಾಡಲು ಅಗತ್ಯ ಬಜೆಟ್ ಗೆ ಬೆಂಬಲವಾಗಲಿದೆ.