ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಜ್ಯೋತಿ’ ಯೋಜನೆಯಡಿ ಅನರ್ಹರನ್ನು ಪತ್ತೆಹಚ್ಚಲು ರಾಜ್ಯಾದ್ಯಂತ ‘ಆಪರೇಷನ್ ಗೃಹಜ್ಯೋತಿ’ ಮನೆ-ಮನೆ ಪರಿಶೀಲನಾ ಕಾರ್ಯ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ, ಜುಲೈ ತಿಂಗಳಿನಲ್ಲಿ ನಿಯಮಿತ ಮೀಟರ್ ರೀಡಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ.
ಜುಲೈನಲ್ಲಿ ಬಿಲ್ ಲೆಕ್ಕಾಚಾರ ಹೇಗೆ?
ಗೃಹಜ್ಯೋತಿ ಫಲಾನುಭವಿಗಳ ಮನೆ ತಪಾಸಣೆಗೆ ಮೀಟರ್ ರೀಡರ್‌ಗಳನ್ನು ನಿಯೋಜಿಸಲಾಗಿರುವುದರಿಂದ, ಜುಲೈನಲ್ಲಿ ಸಿಬ್ಬಂದಿ ನಿಮ್ಮ ಮನೆಗೆ ಬರುವುದಿಲ್ಲ. ಬದಲಾಗಿ, ಗ್ರಾಹಕರ ಕಳೆದ 3 ತಿಂಗಳ ಸರಾಸರಿ ವಿದ್ಯುತ್ ಬಳಕೆಯನ್ನು (Average Consumption) ಆಧರಿಸಿ ಜುಲೈ ತಿಂಗಳ ಬಿಲ್ ಸಿದ್ಧಪಡಿಸಿ ನೀಡಲಾಗುತ್ತದೆ.
ಯಾರಿಗೆ ಈ ನಿಯಮ ಅನ್ವಯಿಸುವುದಿಲ್ಲ?
ಬೆಸ್ಕಾಂ ನಿಯಮದ ಪ್ರಕಾರ, ಈ ಕೆಳಗಿನ ಗ್ರಾಹಕರಿಗೆ ಎಂದಿನಂತೆ ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಲಾಗುತ್ತದೆ:
- ಎಚ್.ಟಿ (HT) ಗ್ರಾಹಕರು
- 40 ಎಚ್.ಪಿ ಹಾಗೂ ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್.ಟಿ ಗ್ರಾಹಕರು
- ಸೋಲಾರ್ ರೂಫ್‌ಟಾಪ್ ಬಳಕೆದಾರರು
- ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದವರು
ಸರ್ಕಾರದ ಉಚಿತ ವಿದ್ಯುತ್ ಸೌಲಭ್ಯ ದುರುಪಯೋಗವಾಗುವುದನ್ನು ತಡೆಯಲು ಬೆಸ್ಕಾಂ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.



