ಕಾರ್ಮಿಕ ಇಲಾಖೆಯಿಂದ ‘ಡಿಜಿಟಲ್ ಹೆಲ್ತ್’ ಯೋಜನೆ ಜಾರಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಜಾಗತಿಕ ಸಾಂಕ್ರಾಮಿಕ ಕೋವಿಡ್-19 ಸಂದರ್ಭದಲ್ಲಿ ಶ್ರಮಿಕ ವರ್ಗ ಮತ್ತು ಅವರ ಕುಟುಂಬ ವರ್ಗದವರು ತುರ್ತು ಪರಿಸ್ಥಿತಿಯಲ್ಲಿ ವೈದ್ಯರನ್ನು ತಲುಪಲಾಗದೆ ಪರದಾಡಿದ ಸಂದರ್ಭ ಮರುಕಳಿಸದಂತೆ ತಡೆಯುವ ಸಲುವಾಗಿ ರಾಜ್ಯ ಕಾರ್ಮಿಕ ಇಲಾಖೆ ಮಹತ್ವದ ಹೆಜ್ಜೆ ಇರಿಸಿದ್ದು, ಶ್ರಮಿಕ ವರ್ಗಕ್ಕೆ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಹತ್ತಿರವಾಗಿಸಲು ಮುಂದಡಿ ಇರಿಸಿದೆ.
ಶುಕ್ರವಾರ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು “ಡಿಜಿಟಲ್ ಟೆಲಿ ಹೆಲ್ತ್ ಮತ್ತು ಟೆಲಿ ಮೆಡಿಸನ್ ಸೇವೆ”ಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವ ಸಂಬ0ಧ ರೈಲ್‌ಟೆಲ್ ಕಾರ್ಪೂರೇಷನ್ ಆಫ್ ಇಂಡಿಯಾ ಜತೆ ಒಡಂಬಡಿಗೆ ಮಾಡಿಕೊಂಡರು.
ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಈ ಒಡಂಬಡಿಕೆಗೆ ಅಂಕಿತ ಹಾಕಿದ ಸಚಿವರು, ಈ ಯೋಜನೆ ಪ್ರಾಯೋಗಿಕವಾಗಿ ಬೆಂಗಳೂರಿನ ಇಂದಿರಾನಗರ ಕಾರಾವಿ ಆಸ್ಪತ್ರೆ ವ್ಯಾಪ್ತಿಯಲ್ಲಿ 8 ಚಿಕಿತ್ಸಾಲಯಗಳು ಮತ್ತು ಹುಬ್ಬಳ್ಳಿ ಕಾರಾವಿ ಆಸ್ಪತ್ರೆ ವ್ಯಾಪ್ತಿಯಲ್ಲಿ 5 ಕಾರಾವಿ ಚಿಕಿತ್ಸಾಲಯಗಳಲ್ಲಿ ಡಿಜಿಟಲ್ ಹೆಲ್ತ್ ಸೇವೆಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಸಮಯ ಮತ್ತು ಪ್ರಯಾಣದ ಬವಣೆ ಪರಿಹಾರದ ಜತೆಗೆ ರೋಗಿಗಳಿಗೆ ತ್ವರಿತ, ಬದ್ಧ, ಶುದ್ಧ ಮತ್ತು ಸಿದ್ದಿ ಚಿಕಿತ್ಸೆ ಇದರಿಂದ ಲಭ್ಯವಾಗಲಿದ್ದು, ಇದೊಂದು ಉತ್ತಮ ಜನಸ್ನೇಹಿ ಸೇವೆ ಆಗಲಿದೆ ಎಂದ ಸಚಿವ ಶಿವರಾಂ ಹೆಬ್ಬಾರ್, ಈ ಯೋಜನೆಯಡಿ ರೋಗಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹತ್ತಿರದ ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ತರಬೇತಿ ಪಡೆದ ಸಿಬ್ಬಂದಿಯ ಸಹಾಯದಿಂದ ಕೇಂದ್ರ ಸ್ಥಾನದಲ್ಲಿನ ನುರಿತ ತಜ್ಞ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ, ಚಿಕಿತ್ಸೆ ಮಾರ್ಗದರ್ಶನ ಪಡೆಯಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮನೋಜ್ ಜೈನ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ, ರೈಲ್ ಟೆಲ್ ಅಧಿಕಾರಿಗಳು, ಇಎಸ್‌ಐ ನಿರ್ದೇಶನಾಲಯದ ಡಾ. ನಾರಾಯಣ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಒಟ್ಟಾರೆ ಕಾರ್ಮಿಕ ಇಲಾಖೆಯ ಈ ಮಹತ್ವಾಕಾಂಕ್ಷಿ ಯೋಜನೆ ಪ್ರಾಯೋಗಿಕ ಯಶಸ್ಸಿನ ನಂತರ ಇನ್ನಷ್ಟು ಪ್ರದೇಶಗಳಿಗೂ ವಿಸ್ತರಿಸಲಾಗುವುದು ಮತ್ತು ಶ್ರಮಿಕ ವರ್ಗದ ಆರೋಗ್ಯ ಕಾಳಜಿಯ ನಿಟ್ಟಿನಲ್ಲಿ ಮಹತ್ವದ ಪಾತ್ರವಹಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!