ಚಿಕ್ಕನಾಯಕನಹಳ್ಳಿ ಕ್ಷೇತ್ರದ ನೀರಿನ ಕೊರತೆ ನೀಗಿಸಲು ಯೋಜನೆಗಳ ಜಾರಿ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ತುಮಕೂರು:

ಬರಗಾಲ ಪೀಡಿತ, ಬಹಳ ಎತ್ತರದ ಪ್ರದೇಶವಾದ ಚಿಕ್ಕನಾಯಕನಹಳ್ಳಿ ಕ್ಷೇತ್ರದ 155 ಕೆರೆಗಳಿಗೆ 4.5 ಟಿಎಂಸಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವ ಮೂಲಕ ಈ ಭಾಗದ ನೀರಿನ ಕೊರತೆಯನ್ನು ನೀಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ವಿವಿಧ ಕಟ್ಟಡ ಕಾಮಗಾರಿಗಳ ಲೋಕಾರ್ಪಣೆ ಮತ್ತು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತ, ಬಹಳ ಎತ್ತರವಾದ ಪ್ರದೇಶವಾದ ಕಾರಣ ಹೇಮಾವತಿ ಯೋಜನೆಯಿಂದ ಈ ಕ್ಷೇತ್ರಕ್ಕೆ ಯಾವುದೇ ಲಾಭವಿರದ ಕಾರಣ ಜೇ.ಸಿ. ಪುರ ಲಿಫ್ಟ್ ಇರಿಗೇಶನ್ ಮೂಲಕ ಹೆಚ್ಚಿನ ನೀರನ್ನು ಈ ಭಾಗಕ್ಕೆ ಹರಿಸಲಾಗಿದೆ.
ಇನ್ನು ಮುಂದಿನ ಹಲವಾರು ವರ್ಷಗಳ ಕಾಲ ಈ ಭಾಗದಲ್ಲಿ ಅಂತರ್ಜಲ ಹೆಚ್ಚಲಿದ್ದು, ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದರು.
ನೂತನ ತಾಲ್ಲೂಕು ಆಡಳಿತ ಸೌಧ, 5 ವಸತಿ ಶಾಲೆಗಳನ್ನು ಸಚಿವ ಮಾಧುಸ್ವಾಮಿಯವರು ತಾಲ್ಲೂಕಿಗೆ ನೀಡುವ ಮೂಲಕ ಜನಪರ ಜನಕಲ್ಯಾಣ ನಿಲುವನ್ನು ಹೊಂದಿದ್ದಾರೆ ಎಂದರು.
ಕೃಷಿ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆ ಅಭಿವೃದ್ಧಿ ಹೊಂದಿದ್ದಲ್ಲಿ ರಾಜ್ಯದ ಜಿಡಿಪಿ ಹೆಚ್ಚುತ್ತದೆ. ತುಮಕೂರು ಜಿಲ್ಲೆ ಕರ್ನಾಟಕದ ಅಭಿವೃದ್ಧಿಗೆ ಪೂರಕ ಎಂದರು.
ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೆ ಮಲ್ಟಿ ಮೋಡ್ ಪಾರ್ಕ್, ವಿಶೇಷ ಹೂಡಿಕೆ ವಲಯ (SIR) ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಜಿಲ್ಲೆಯ ಅಡಿಕೆ ಹಾಗೂ ತೆಂಗಿಗೆ ಬಹಳಷ್ಟು ಪ್ರಾಮುಖ್ಯತೆ ಇದೆ, ಈ ಬೆಳೆಗಳಿಗೆ ಸ್ಥಿರತೆ ಮತ್ತು ಮಾರುಕಟ್ಟೆ ಅತ್ಯವಶ್ಯಕ ಇವು ಎರಡನ್ನೂ ಸಹ ಒದಗಿಸಲಾಗಿದೆ ಎಂದರು.
ಎತ್ತಿನಹೊಳೆ ಯೋಜನೆ ಕೆಲಸ ಬಹುತೇಕ ಮುಗಿಯುತ್ತಿದ್ದು, ಬರುವ ಜೂನ್ ವೇಳೆಗೆ ನೆರೆಯ ಸಕಲೇಶಪುರ, ಅರಸೀಕೆರೆ ನಂತರ ಚಿಕ್ಕನಾಯಕನಹಳ್ಳಿ, ತಿಪಟೂರು ತಾಲ್ಲೂಕಿಗಳಿಗೆ ನೀರು ಹರಿಯಲಿದೆ ಎಂದರು.
ಕಿಸಾನ್ ಸಮ್ಮಾನ ಯೋಜನೆಯಡಿ ತಾಲ್ಲೂಕಿನ 31605 ರೈತರಿಗೆ 10ಸಾವಿರ ಹಣ ರೈತರ ಖಾತೆಗೆ ಜಮೆ ಆಗಿದೆ, ಇದಕ್ಕಾಗಿ 89 ಕೋಟಿ ವ್ಯಯಿಸಲಾಗಿದೆ ಎಂದರು.
ಕಳೆದ ಮೂರು ವರ್ಷದಲ್ಲಿ ಜಲಜಿವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸಲಾಗಿದೆ ಎಂದರು.
ಸಚಿವ ಮಾಧುಸ್ವಾಮಿ ಅವರು ಮಾತನಾಡಿ, ತಾಲ್ಲೂಕಿನಲ್ಲಿ ಆಗಿರುವ ಅಭಿವೃದ್ಧಿಯನ್ನು ಜನತೆ ಮನಗಾಣಬೇಕಿದೆ. ತಾಲ್ಲೂಕಿಗೆ ಒಂದು ಆಡಳಿತ ಸೌಧ, 5 ವಸತಿ ಶಾಲೆ, 55 ಕೋಟಿ ರೂ ವೆಚ್ಚದಲ್ಲಿ ಯುಜಿಡಿ ಯೋಜನೆ, ಸ್ಲಂ ಬೋರ್ಡ್ ವತಿಯಿಂದ 48 ಕೋಟಿ ರೂ ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಲು ಪ್ರಾರಂಭಿಸಲಾಗಿದೆ, ತಾಲ್ಲೂಕಿನಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳು ನಡೆಯುತ್ತಿವೆ, ತಾಲ್ಲೂಕಿಗೆ ಒಂದು ಪಾಲಿಟೆಕ್ನಿಕ್ ಕಾಲೇಜ್ ನೀಡಲಾಗಿದೆ, ಚಿ.ನಾ. ಹಳ್ಳಿ ಹಾಗೂ ಹುಳಿಯಾರ್ ಗೆ 2 ಪೊಲೀಸ್ ಠಾಣೆ ಕಟ್ಟಡಗಳು ಉದ್ಘಾಟನೆಯೂ ಕೂಡ ಆಗಿದೆ ಎಂದರು.
ಕಾರ್ಯಕ್ರಮದಲ್ಲಿಸಚಿವ ಕೋಟ ಶ್ರೀನಿವಾಸ ಪೂಜಾರಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಎಂಎಲ್ಸಿ ಚಿದಾನಂದಗೌಡ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪುರಸಭೆ ಸದಸ್ಯೆ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!