ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಸರ್ಕಾರವನ್ನು ಟೀಕಿಸಿದ್ದಾರೆ. ಪ್ರಧಾನಿ ಶಹಬಾಜ್ ಷರೀಫ್ ಮತ್ತು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಜರ್ದಾರಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಕುರಿತು ಪ್ರಶ್ನೆಗಳನ್ನು ಕೇಳಿದರು. ಶೆಹಬಾಜ್ ಷರೀಫ್ ಪ್ರಸ್ತುತ ರಾಜ ಚಾರ್ಲ್ಸ್-III ಪಟ್ಟಾಭಿಷೇಕಕ್ಕಾಗಿ ಯುಕೆಯಲ್ಲಿದ್ದಾಗ, ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್ ಅವರು ಗೋವಾದಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಿದೇಶಾಂಗ ಮಂತ್ರಿಗಳ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಲು ಗುರುವಾರ ಭಾರತಕ್ಕೆ ಭೇಟಿ ನೀಡಿದ್ದರು.
ಇಮ್ರಾನ್ ಖಾನ್ ಲಾಹೋರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಭಾಗವಹಿಸಿ ಈ ಸಂದರ್ಭದಲ್ಲಿ ಪಾಕ್ ಸರ್ಕಾರಕ್ಕೆ ಛೀಮಾರಿ ಹಾಕಿದರು. ಬಿಲಾವಲ್ ಭುಟ್ಟೋ, ನೀವು ಪ್ರಪಂಚದಾದ್ಯಂತ ಪ್ರವಾಸ ಮಾಡುತ್ತಿದ್ದೀರಿ, ಪಾಕಿಸ್ತಾನವು ಈ ಪ್ರವಾಸಗಳಿಗೆ ಹಣವನ್ನು ಖರ್ಚು ಮಾಡುತ್ತಿದೆ.. ಆದರೆ ಈ ಪ್ರವಾಸಗಳಿಂದ ದೇಶಕ್ಕೆ ಏನಾಗುತ್ತಿದೆ..? ಸಾಧಕ-ಬಾಧಕಗಳೇನು? ಎಂದು ಪ್ರಶ್ನಿಸಿದ್ದಾರೆ. ಭುಟ್ಟೋ ಭಾರತಕ್ಕೆ ಭೇಟಿ ನೀಡಿ ಏನು ಸಾಧಿಸಿದ್ದಾರೆ. ಪಾಕ್ ಮರ್ಯಾದೆಯನ್ನು ಭಾರತದಲ್ಲಿ ಹರಾಜು ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.
ದಾಯಾದಿ ದೇಶವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅಲ್ಲಿನ ಜನರಿಗೆ ತಿನ್ನಲು ಆಹಾರವೂ ಸಿಗುತ್ತಿಲ್ಲ, ಬೆಲೆ ಗಗನಕ್ಕೇರುತ್ತಿದೆ. ಮತ್ತೊಂದೆಡೆ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿರತೆ ತಾಂಡವವಾಡುತ್ತಿದೆ. ಚುನಾವಣೆ ನಡೆಸುವ ಕುರಿತು ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಡುವೆ ಘರ್ಷಣೆಯ ವಾತಾವರಣವಿತ್ತು. ಇಮ್ರಾನ್ ಖಾನ್ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯನ್ನು ಟೀಕಿಸುತ್ತಿದ್ದಾರೆ.