Wednesday, October 5, 2022

Latest Posts

ಕೆಲವೇ ವರ್ಷಗಳಲ್ಲಿ ಭಾರತ ವಿಶ್ವ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಲಿದೆ: ನರೇಂದ್ರ ಜೀ

ಹೊಸದಿಗಂತ ವರದಿ, ಕಲಬುರಗಿ
ಮುಂದಿನ ಐದು ದಶಕಗಳ ಅವಧಿಯಲ್ಲಿ ಭಾರತ ವಿಶ್ವದ ಪ್ರಮುಖ ವೇದಿಕೆಯಲ್ಲಿ ಅಗ್ರಸ್ಥಾನವಾಗಿ ಕಂಗೊಳಿಸಲಿದೆ ಎಂದು ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕರಾದ ನರೇಂದ್ರ ಜೀ ತಿಳಿಸಿದರು.
ಅವರು ಭಾನುವಾರ ನಗರದ ಕೋಠಾರಿ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ನಗರದ ವತಿಯಿಂದ ಏರ್ಪಡಿಸಲಾದ ಶ್ರೀ ರಕ್ಷಾಬಂಧನ ಉತ್ಸವದಲ್ಲಿ ಮಾತನಾಡಿ, ಇಡೀ ವಿಶ್ವದಾದ್ಯಂತ ಭಾರತ ಅತೀ ದೊಡ್ಡ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ಸಂಘಕ್ಕಿದೆ. ಜ್ಞಾನ, ತಿಳುವಳಿಕೆ, ಸಂಸ್ಕಾರ ಹಾಗೂ ದೇಶದ ಸೈನಿಕರ ಬಲದಿಂದ ಭಾರತ ಬಲಿಷ್ಠವಾಗಿ ಬೆಳೆದು ನಿಂತಿದೆ ಎಂದರು.
ಭಾರತ ಒಂದು ಕುಟುಂಬವಿದ್ದಂತೆ. ನಮ್ಮ ಪೂರ್ವಜರು ನಾವೆಲ್ಲರೂ ಒಂದೇ ತಾಯಿಯ ಮಕ್ಕಳೆಂಬ ಪಾಠ ಹೇಳಿದ್ದಾರೆ. ಇದನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆ ಇದೆ. ಹಿಂದೊಮ್ಮೆ ಹಿಂದೂ ಎಂದು ಹೇಳಿಕೊಳ್ಳಲು ಹಿಂಜರಿಯುವ ಕಾಲವಿತ್ತು. ಆದರೆ ಇದೀಗ ಪ್ರತಿಯೊಬ್ಬರು ತಾವು ಹೆಮ್ಮೆಯಿಂದ ಹಿಂದೂ ಎಂದು ಹೇಳಿಕೊಳ್ಳುವಂಥಹ ವಾತಾವರಣ ನಿರ್ಮಾಣವಾಗಿದೆ ಎಂದರು.
ಹಿಂದೂ ಸಮಾಜದಲ್ಲಿ ಪ್ರತಿಯೊಂದು ಹಬ್ಬಕ್ಕೆ ತನ್ನದೇ ಆದ ಇತಿಹಾಸ ಮತ್ತು ವೈಶಿಷ್ಟ್ಯತೆ ಇದೆ. ನಾವು ಆಚರಣೆ ಮಾಡುವ ಪ್ರತಿ ಉತ್ಸವವು ಹಬ್ಬದಂತಿರಬೇಕು. ದೀಪೋತ್ಸವ, ಯುಗಾದಿ, ನರಕ ಚತುರ್ಥಿ ಸೇರಿದಂತೆ ಅನೇಕ ಹಬ್ಬಗಳು ನಮ್ಮ ಪುರಾತನ ಇತಿಹಾಸಕ್ಕೆ ಸಾಕ್ಷಿಯಾಗಿವೆ. ರಕ್ಷಾ ಬಂಧನ ಹಬ್ಬವೂ ಸಹ ಶ್ರಾವಣ ಪೂರ್ಣಿಮೆಯ ದಿನದಂದು ಆಚರಿಸುವ ಹಬ್ಬವಾಗಿದೆ. ಸ್ವಯಂಸೇವಕ ಸಂಘವು ಮನೆ ಮನೆ ಹಬ್ಬವನ್ನು ರಾಷ್ಟ್ರೀಯ ಹಬ್ಬವಾಗಿ ಮಾಡಿದೆ ಎಂದರು.
ಪರಸ್ಪರ ಒಬ್ಬರಿಗೊಬ್ಬರು ರಕ್ಷೆ ಕಟ್ಟುವ ಮೂಲಕ ಭಾರತ ಮಾತೆಯ ರಕ್ಷಣೆಯ ಸಂಕಲ್ಪದ ಜೊತೆ ಜೊತೆಗೆ ನಮ್ಮ ಹಿಂದೂ ಸಹೋದರ, ಸಹೋದರಿಯರ ರಕ್ಷಣೆಯ ಹೊಣೆಯೂ ನಮ್ಮದಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!