ಹೊಸದಿಗಂತ ವರದಿ, ಬಳ್ಳಾರಿ:
ಬಳ್ಳಾರಿಯಲ್ಲೇ ಮೇಗಾ ಡೈರಿ ಸ್ಥಾಪನೆ ಮಾಡಲಾಗುವುದು, ಇದು ಭರವಸೆಯಲ್ಲಿ ಸ್ಥಾಪನೆಗೆ ಅಗತ್ಯ ಸಿದ್ದತೆಗಳು ನಡೆದಿವೆ ಎಂದು ರಾಬಕೋ ಅಧ್ಯಕ್ಷ ಭೀಮಾ ನಾಯ್ಕ್ ಅವರು ಹೇಳಿದರು.
ನಗರದ ರಾಬಕೋ ಹಾಲು ಒಕ್ಕೂಟದ ಕಚೇರಿ ಆವರಣದಲ್ಲಿ ಮಂಗಳವಾರ ಕೆನೆ ಭರಿತ ನಂದಿನಿ ಸಮೃದ್ಧಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದರು. 108 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೈರಿ ನಿರ್ಮಾಣವಾಗಲಿದೆ. ಈ ಕುರಿತು ಹಿಂದೇಯೇ ತೀರ್ಮಾನಿಸಲಾಗಿತ್ತು, ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳದ ಅಭಾವ ಎದುರಾದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಡಿಎಂಎಫ್ ಅನುದಾನ ಮಂಜೂರಿಗಾಗಿ ಸಚಿವರು, ಅದಿಕಾರಿಗಳನ್ನು ಭೇಟಿ ಮಾಡಿ, ಶೀಘ್ರದಲ್ಲೇ ಡೈರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸದ್ಯ ರಾಬಕೊ ಹಾಲು ಒಕ್ಕೂಟ ನಷ್ಟದಲ್ಲಿದೆ, ಸುಮಾರು 4.30 ಕೋಟಿ ರೂ. ಅಂದಾಜಿಸಿದೆ, ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆ, ಟ್ರಾನ್ಸ್ಫೋರ್ಟ್ ದರ ಹೆಚ್ಚಳ, ನಿಗದಿಗಿಂದ ಹೆಚ್ಚು ಹಾಲು ಶೇಖರಣೆ, ಕೋವಿಡ್-19 ಎಫೆಕ್ಟ್ ಸೇರಿದಂತೆ ನಾನಾ ಕಾರಣಗಳಿಂದ ಸದ್ಯ ನಷ್ಟದಲ್ಲಿದೆ. ಇದನ್ನು ಸರಿದೂಗಿಸಲು ಅಗತ್ಯ ಕ್ರಮಕೈಗೊಂಡಿದೆ, ಕ್ಷೀರ ಭಾಗ್ಯ ಯೋಜನೆಗೆ ವಿತರಿಸುವ ಹಾಲಿನ ಪುಡಿಯಿಂದ ನಷ್ಟ ಹೆಚ್ಚಾಗುತ್ತಿದೆ. ಒಂದು ಪ್ಯಾಕೇಟ್ ಹಾಲಿನ ಪೌಡರ್ ತಯಾರಿಕೆಗೆ ಎಂಟು ಲೀಟರ್ ಹಾಲು ಬೇಕಾಗಲಿದೆ. ಸರ್ಕಾರ ಇದಕ್ಕೆ ತೀರಾ ಕಡಿಮೆ ಹಣ ನೀಡುತ್ತಿದೆ. ಪ್ರತಿಲೀಟರ್ ಗೆ ಆರು ರೂ.ನಷ್ಟವಾಗುತ್ತಿದೆ. ನಮ್ಮದೊಂದೇ ಅಲ್ಲ, ರಾಜ್ಯದ 14 ಒಕ್ಕೂಟಗಳಿದ್ದು, ಎಲ್ಲವೂನಷ್ಟ ಅನುಭವಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ, ನಿರ್ದೆಶಕರಾದ ರವೀಂದ್ರ, ಸೀತಾರಾಮ್ ಲಕ್ಷ್ಮೀ, ಕವಿತಾ ಗುಳಗಣ್ಣನವರ್, ಜಿ.ಸತ್ಯನಾರಾಯಣ, ನಾಗಮಣಿ, ಎಂ.ಸತ್ಯನಾರಾಯಣ, ಶ್ರೀಕಾಂತ್ ಮರಳುಸಿದ್ದಪ್ಪ, ಒಕ್ಕೂಟದ ವ್ಯವಸ್ಥಾಪಕ ತಿರುಪತೆಪ್ಪ, ಮಾರುಕಟ್ಟೆ ಅದಿಕಾರಿ ವೆಂಕಟೇಶ ಗೌಡ ಸೇರಿದಂತೆ ಇತರರಿದ್ದರು.