ಕೊಡಗಿನಲ್ಲಿ ಕೋವಿಡ್ ಆರೈಕೆ ಕೇಂದ್ರ: ಅಗತ್ಯ ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

ಹೊಸದಿಗಂತ ವರದಿ, ಮಡಿಕೇರಿ:

ದೇಶದಲ್ಲಿ ಕೋವಿಡ್ ಮೂರನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ವಿವಿಧ ಅಧಿಕಾರಿಗಳ ಜೊತೆ ಚರ್ಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿಯವರು, ಕೋವಿಡ್ ಪ್ರಕರಣಗಳು ಹೆಚ್ಚಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಆ ನಿಟ್ಟಿನಲ್ಲಿ ಕಳೆದ ಬಾರಿಯಂತೆ ಜಿಲ್ಲೆಯ 5 ತಾಲೂಕುಗಳಲ್ಲೂ’‘ಕೋವಿಡ್ ಆರೈಕೆ ಕೇಂದ್ರ’ ಆರಂಭಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದು ಹೇಳಿದರು.
ಕೋವಿಡ್ ಆರೈಕೆ ಕೇಂದ್ರಗಳನ್ನು ಆದ್ಯತೆ ಮೇಲೆ ಪ್ರತೀ ತಾಲೂಕಿನಲ್ಲಿ ಆರಂಭಿಸಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಂಬಂಧ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.
ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್ ಗುಣಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವುದು, ಸಂಪರ್ಕಿತರನ್ನು ಪತ್ತೆ ಹಚ್ಚುವುದು, ಮತ್ತಿತರ ಕಾರ್ಯ ನಿರ್ವಹಿಸಬೇಕಿದೆ. ಹಾಗೆಯೇ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕೋವಿಡ್ ನಿಯಂತ್ರಣ ಸಂಬಂಧ ಮೊದಲ ಮತ್ತು ಎರಡನೇ ಅಲೆ ಅವಧಿಯಲ್ಲಿ ಕೈಗೊಳ್ಳಲಾಗಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು, ಮೂರನೇ ಅಲೆ ಸಂದರ್ಭದಲ್ಲೂ ಕೈಗೊಳ್ಳಬೇಕಿದೆ ಎಂದು ಅವರು ಹೇಳಿದರು.
ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ, ಜೊತೆಗೆ ಅಗತ್ಯ ಆಮ್ಲಜನಕ ದಾಸ್ತಾನು ಮಾಡಿಕೊಳ್ಳುವುದು ಮತ್ತಿತರ ಬಗ್ಗೆ ಗಮನಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಸರಾಸರಿ ಒಂದರೊಳಗೇ ಇದ್ದು, ಆತಂಕ ಪಡುವ ಅಗತ್ಯವಿಲ್ಲ, ಆದರೂ ಮುನ್ನೆಚ್ಚರ ವಹಿಸುವುದು ಅಗತ್ಯ ಎಂದು ಹೇಳಿದರು.’
ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಆಗಾಗ ಸ್ಯಾನಿಟೈಸರ್/ ಸೋಪ್ ಬಳಸಿ ಕೈತೊಳೆಯುವುದು, ಹೀಗೆ ಹಲವು ಕಾರ್ಯಗಳನ್ನು ಮಾಡಬೇಕಿದೆ ಎಂದು ಸಲಹೆ ಮಾಡಿದರು.
ಕೋವಿಡ್ ಗುಣಲಕ್ಷಣಗಳು ಕಂಡುಬಂದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲು ಆಗಬೇಕು. ಇತರರಿಗೆ ಹರಡುವುದನ್ನು ತಡೆಯಬೇಕು. ಹೋಂ ಐಸೋಲೇಷನ್ ಉತ್ತಮವಾಗಿದ್ದಲ್ಲಿ ಅಲ್ಲಿಯೂ ಸಹ ಪ್ರತ್ಯೇಕ ಇರಬಹುದಾಗಿದೆ ಎಂದು ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಅವರು, ಕಳೆದ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಮಡಿಕೇರಿ ತಾಲೂಕಿಗೆ ಸಂಬಂಧಿಸಿದಂತೆ ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜು, ನವೋದಯ ಶಾಲೆ, ಮೊರಾರ್ಜಿ ದೇಸಾಯಿ ಶಾಲೆಗಳು ಹೀಗೆ ಹಲವು ಕಡೆಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ಅಪರ‌ಜಿಲ್ಲಾಧಿಕಾರಿ ರಾಜು ಮೊಗವೀರ, ಲೋಕೋಪಯೋಗಿ ಇಲಾಖೆಯ ಎಇಇ ಶಿವರಾಮ್, ಭೂ ದಾಖಲೆಗಳ ಉಪ ನಿರ್ದೇಶಕ ಪಿ.ಶ್ರೀನಿವಾಸ್, ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಶಂಕರ ನಾರಾಯಣ, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಸುರೇಶ್ ಭಟ್, ಖಜಾನೆ ಇಲಾಖೆಯ ಉಪ ನಿರ್ದೇಶಕಿ ಪದ್ಮಜಾ, ಐಟಿಡಿಪಿ ಇಲಾಖಾ ಅಧಿಕಾರಿ ಶ್ರೀನಿವಾಸ್, ಬಿಸಿಎಂ ಇಲಾಖೆ ಅಧಿಕಾರಿ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್, ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್.ಗುರುಸ್ವಾಮಿ, ಸೆಸ್ಕ್ ಎಇಇ ವಿನಯ ಕುಮಾರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ವಿಶಾಲ್ ಕುಮಾರ್ ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!