ಹೊಸದಿಗಂತ ವರದಿ,ಚಿತ್ರದುರ್ಗ:
ಮನುಷ್ಯ ಬದುಕಿದ್ದಾಗ ಎರಡು ತುತ್ತು ಅನ್ನ, ಸತ್ತ ಮೇಲೆ ಆರಡಿ ಮೂರಡಿ ಜಾಗ ಸಾಕು. ಮನುಷ್ಯನ ಬದುಕಿಗೆ ಇದ್ದಕ್ಕಿಂದ ಮತ್ತೇನು ಬೇಕು ಎಂದು ಕೆಲವರು ವೈರಾಗ್ಯದ ಮಾತುಗಳನ್ನು ಆಡುವುದನ್ನು ಕೇಳಿದ್ದೇವೆ. ಆದರೆ ರಾಜ್ಯದಲ್ಲಿ ವಕ್ಫ್ ಮಂಡಳಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈಗ ಹಿಂದುಗಳ ರುದ್ರಭೂಮಿಯ ಮೇಲೂ ಕಣ್ಣು ಹಾಕಿದೆ.
ಇದರಿಂದ ಮನುಷ್ಯ ಸತ್ತ ನಂತರ ಅಂತ್ಯ ಸಂಸ್ಕಾರಕ್ಕೂ ಜಾಗ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುವುದೇನೋ ಎಂಬ ಅನುಮಾನ ಮೂಡುತ್ತಿದೆ.
ರಾಜ್ಯದಲ್ಲಿ ವಕ್ಫ್ ಅಬ್ಬರ ನಿಲ್ಲುವಂತೆ ಕಾಣುತ್ತಿಲ್ಲ. ಕಳೆದ ಹಲವು ದಿನಗಳಿಂದ ರೈತರ ಜಮೀನು, ದೇವಸ್ಥಾನಗಳ ಜಾಗದ ಮೇಲೆ ಕನ್ನೂ ಹಾಕಿದ್ದಾಯಿತು. ಈಗ ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದೂಗಳ ರುದ್ರಭೂಮಿಯ ಮೇಲೂ ವಕ್ಫ್ ಕಣ್ಣು ಹಾಕಿದೆ. ಒಂದೊಂದೇ ಜಿಲ್ಲೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಸಮಸ್ಯೆ ನೋಡಿದರೆ ರಾಜ್ಯದ ಎಲ್ಲಾ ರೈತರು ತಮ್ಮ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎನಿಸುತ್ತದೆ. ಇದೀಗ ವಕ್ಫ್ ತಲೆನೋವು ಕೋಟೆನಾಡಿಗೂ ಆವರಿಸಿದೆ. ರುದ್ರಭೂಮಿಯೂ ವಕ್ಫ್ ಗೆ ಸೇರಿದ್ದು ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ರಾಜ್ಯದಲ್ಲಿ ಹಿಂದು ರೈತರ ಜಮೀನುಗಳು, ದೇವಸ್ಥಾನಗಳನ್ನು ಇದ್ದಕ್ಕಿದ್ದಂತೆ ವಕ್ಫ್ ಬೋರ್ಡ್‌ಗೆ ಸೇರ್ಪಡೆ ಮಾಡಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಅಲ್ಲದೇ ರೈತರ ಜಮೀನುಗಳನ್ನು ಕಬಳಿಸಲು ಮುಂದಾಗಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈಗ ರುದ್ರಭೂಮಿಗೂ ವಕ್ಫ್ ಹಾವಳಿಯ ಬಿಸಿ ತಟ್ಟಿದೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದ ಹಿಂದು ರುದ್ರಭೂಮಿಯನ್ನು ಈಗ ವಕ್ಫ್ ಬೋರ್ಡ್‌ಗೆ ಸೇರಿಸಿದ್ದು, ಜಿಲ್ಲೆಯ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ನಂದನಹೊಸೂರು ಗ್ರಾಮದಲ್ಲಿ ಹಿಂದು ರುದ್ರಭೂಮಿಯನ್ನು ಇದೀಗ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ೧೯೬೫ರಲ್ಲಿ ಗ್ರಾಮದ ಜಮೀನನ್ನು ಸ್ಮಶಾನ ಜಾಗ ಎಂದು ಮೀಸಲಿರಿಸಲಾಗಿತ್ತು. ಇದಾದ ನಂತರ ೨೦೧೭-೨೦೧೮ ರಲ್ಲಿ ಮುಸ್ಲಿಂ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ ಎನ್ನಲಾಗಿದೆ. ಇದಕ್ಕೂ ಮುನ್ನ ಅಲ್ಲಿನ ಗ್ರಾಮಸ್ಥರು ಹುಲ್ಲಿನ ಬಣವೆ ಹಾಕಿಕೊಂಡು ಕಣ ಮಾಡಿಕೊಂಡಿದ್ದರು. ಇದೀಗ ಜಾಗ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದಾಗ ಹಿಂದುಗಳು ಮತ್ತು ಮುಸ್ಲೀಮರ ನಡುವೆ ಜಾಗದ ವಿಚಾರದಲ್ಲಿ ವಾದ ವಿವಾದ ಉಂಟಾಗಿದೆ.