ಹೊಸ ದಿಗಂತ ವರದಿ, ಕಾರವಾರ:
ಗೋವಾ ರಾಜಕೀಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಬಿಜೆಪಿ ಈ ರಾಜ್ಯದಲ್ಲಿ ಮೂರನೆಯ ಬಾರಿ ಅಧಿಕಾರ ಹಿಡಿಯಲಿದ್ದು, ಬಹುಮತದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಈ ರಾಜ್ಯದ ಉಸ್ತುವಾರಿಯಾಗಿದ್ದ ಭಾಜಪಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಪಕ್ಷದ ಗೆಲುವಿನ ನಂತರದಲ್ಲಿ ಅವರು ಹೊಸದಿಗಂತ ಆನ್ ಲೈನ್‌ಡೆಸ್ಕ್ ಜೊತೆ ಮಾತನಾಡಿ, ಈ ಪುಟ್ಟ ರಾಜ್ಯದಲ್ಲಿ ಬಿಜೆಪಿ ಗೆಲುವಿನ ದಡ ತಲುಪಿರುವುದಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿ ಅವರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ನೀಡಿರುವ ಆಡಳಿತ ಪ್ರಮುಖ ಕಾರಣವಾಗಿದೆ . ರಾಷ್ಟ್ರೀಯ ಮತ್ತು ಅಭಿವೃದ್ದಿಪರ ಮನೋಭಾವವುಳ್ಳ ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಸದನದಲ್ಲಿ ಈ ಬಗ್ಗೆ ಉತ್ತರ ಸಿಗಲಿದೆ ಎಂದಿದ್ದಾರೆ.
ಗೋವಾ ರಾಜ್ಯದಲ್ಲಿ ಯಾವುದೇ ಪಕ್ಷ ಸತತವಾಗಿ ಅಧಿಕಾರ ಹಿಡಿದ ಇತಿಹಾಸವೇ ಇಲ್ಲ. ಚುನಾವಣೆಯ ಪೂರ್ವದಲ್ಲಿ ಇಡೀ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ, ಬಿಜೆಪಿ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ ಎಂದು ಪ್ರಚಾರ ಮಾಡಲಾಯ್ತು. ಆದರೆ ಇದು ಸುಳ್ಳು ಎನ್ನುವುದು ಸಾಬೀತಾಗಿದೆ. ಇಲ್ಲಿಯ ಜನ ನಕಾರಾತ್ಮಕ ಸುದ್ದಿಯನ್ನು ನಂಬಲಿಲ್ಲ. ಇದರ ಜೊತೆಗೆ ಬಿಜೆಪಿಯ ಕಾರ್ಯಕರ್ತರು ಮನೆಮನೆಗೆ ಬಿಜೆಪಿ ಸರ್ಕಾರದ ಸಾಧನೆ ತಲುಪಿಸಿದ್ದ ರೀತಿ ಅದ್ಭುತ. ಇಡೀ ಪಕ್ಷ ಕಠಿಣ ಶ್ರಮದ ಮೂಲಕ ಗೆಲುವಿನ ದಡ ತಲುಪಿದೆ. ಇದಕ್ಕಾಗಿ ಪ್ರಧಾನಿ ಮೋದಿ, ರಾಷ್ಟ್ರೀಯ ಮತ್ತು ಆ ರಾಜ್ಯದ ಬಿಜೆಪಿ ಅಧ್ಯಕ್ಷರು , ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಭರವಸೆ ಮರೆಯೊಲ್ಲ :
ಗೋವಾ ರಾಜ್ಯದಲ್ಲಿ ಕನ್ನಡಿಗರು ಒಂದಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಇವರೆಲ್ಲರಿಗೂ ಕೃತಜ್ಞರಾಗಿದ್ದೇವೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಕನ್ನಡ ಭವನ ನಿರ್ಮಾಣ ಮತ್ತಿತರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದರು.