ಹೊಸದಿಗಂತ ಡಿಜಿಟಲ್ ಡೆಸ್ಕ್
ಹೊಸದಿಲ್ಲಿ: ಬಿಹಾರದಲ್ಲಿ ಒಂದರ ಹಿಂದೆ ಒಂದರಂತೆ ಹಲವೆಡೆ ನಡೆಯುತ್ತಿರುವ ನಿರಂತರ ಬಾಂಬ್ ಸ್ಪೋಟಗಳು ದೇಶದ ಆಂತರಿಕ ಭದ್ರತೆಗೆ ಸವಾಲಾಗಿ ಪರಿಣಮಿಸಿವೆ. ಮಾತ್ರವಲ್ಲದೆ, ಅಲ್ಲಿನ ಸರಕಾರ ಮತ್ತು ಆಡಳಿತ ಯಂತ್ರದಲ್ಲಿನ ಲೋಪಗಳನ್ನು ಬಯಲಿಗೆಳೆದಿವೆ ಎಂದು ವಿಶ್ವ ಹಿಂದು ಪರಿಷತ್ತಿನ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬಿಹಾರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ಆಂತಕದ ಪರಿಸ್ಥಿತಿಯನ್ನು ಕೊನೆಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಘಟನೆಗಳ ಬಗ್ಗೆ ಬಹು ಆಯಾಮ ಮತ್ತು ಬಹು ಹಂತಗಳಲ್ಲಿ ಎನ್‌ಐಎ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಕಳೆದ 9 ತಿಂಗಳುಗಳಲ್ಲಿ ಬಂಕಾ, ಅರಾರಿಯಾ, ಖಗರಿಯಾ, ಸಿವಾನ್, ದರ್ಭಾಂಗಾ, ಭಾಗಲ್ಪುರ್, ಮತ್ತೀಗ ಗೋಪಾಲ್‌ಗಂಜ್ ಸೇರಿದಂತೆ ಅರ್ಧ ಡಜನ್‌ಗಿಂತಲೂ ಹೆಚ್ಚು ಸ್ಥಳಗಳಲ್ಲಿ ಬಾಂಬ್ ಸ್ಪೋಟಗಳು ನಡೆದಿವೆ. ಈ ಘಟನೆಗಳಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕ ಕಟ್ಟಡಗಳು ಹಾನಿಗೊಂಡಿವೆ. ಈ ಘಟನೆಗಳಲ್ಲಿ ಜಿಹಾದಿ ಭಯೋತ್ಪಾದನೆಯ ವಾಸನೆ ಮತ್ತು ಬಾಂಗ್ಲಾದೇಶದ ಸಂಪರ್ಕಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸ್ಪೋಟಗಳ ಪ್ರಕರಣಗಳನ್ನು ಪರಿಹರಿಸುವಲ್ಲಿ ಪೊಲೀಸ್ ಆಡಳಿತದ ವಿಧಾನ ಮತ್ತು ಮಾರ್ಗವು ಕೇವಲ ವಾಸ್ತವದ ಮರೆಮಾಚುವಿಕೆಯಾಗಿದೆ. ಭೀಕರ ಬಾಂಬ್ ಸ್ಪೋಟಗಳನ್ನು ಕೇವಲ ‘ಪಟಾಕಿ ಸ್ಪೋಟ’ ಎಂದು ಹೇಳುತ್ತಿರುವುದು ರಾಜ್ಯಕ್ಕೆ ಅತ್ಯಂತ ಕಳವಳಕಾರಿ ವಿಷಯ. ಅಲ್ಲದೇ ಈ ಪ್ರಕರಣಗಳು ತನಿಖೆಗೆ ಅರ್ಹವಲ್ಲ ಎಂದು ತರ್ಕಿಸಿ, ಇಲ್ಲಿಯವರೆಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.
ಬಿಹಾರದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಮುಸ್ಲಿಂ ಪ್ರಾಬಲ್ಯವಿದೆ. ನೆರೆಯ ಜಾರ್ಖಂಡ್‌ನ ಸಾಹಿಬ್‌ಗಂಜ್ ಮತ್ತು ಪಾಕುರ್ ಜಿಲ್ಲೆಗಳು ಬಾಂಗ್ಲಾ ಅಕ್ರಮ ವಲಸಿಗರ ಒಳನುಸುಳುವಿಕೆಯ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ವಿದೇಶಿ ನುಸುಳುಕೋರ ಬಾಂಗ್ಲಾದೇಶಿ ತಾಲಿಬ್ಸ್ (ವಿದ್ಯಾರ್ಥಿಗಳು) ಕೂಡ ಇಲ್ಲಿ ಅಪಾರ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಲವ್ ಜಿಹಾದಿಗಳು ನಿರಂತರವಾಗಿ ಹಿಂದು ಹುಡುಗಿಯರನ್ನು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹೆಣ್ಣು ಮಕ್ಕಳನ್ನು ಬಲಿಪಶು ಮಾಡುತ್ತಿದ್ದಾರೆ. ಹತ್ತಾರು ಘಟನೆಗಳು ಇದಕ್ಕೆ ಸಾಕ್ಷಿಯಾಗಿವೆ. ಅನೇಕ ಹಿಂದು ಹೆಣ್ಣುಮಕ್ಕಳು ಅಪಹರಣ ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ. ಬಲವಂತವಾಗಿ ಬಾಂಗ್ಲಾದೇಶ ಮತ್ತು ನೇಪಾಳಕ್ಕೆ ಒಯ್ಯಲ್ಪಟ್ಟಿದ್ದಾರೆ. ಪುರ್ನಿಯಾದ ಮನಿಷಾ ಸಿಂಗ್ ಅವರಂತಹ ಅನೇಕ ಸಂತ್ರಸ್ತ ಹೆಣ್ಣುಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆಗಳ ನ್ಯಾಯಯುತ, ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸಬೇಕು. ಈ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕು. ಜಿಹಾದಿಗಳು ಮತ್ತು ಅಪರಾಧಿಗಳನ್ನು ಹತ್ತಿಕ್ಕಲು ಬಿಹಾರ ಸರಕಾರವನ್ನು ಒತ್ತಾಯಿಸಿದ ವಿಹಿಂಪ ಪ್ರಧಾನ ಕಾರ್ಯದರ್ಶಿ ಪರಾಂಡೆ, ತಕ್ಷಣವೇ ಸಂತ್ರಸ್ತರಿಗೆ ನ್ಯಾಯ ಮತ್ತು ನ್ಯಾಯಯುತ ಪರಿಹಾರವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ