ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಆರು ಜನರ ಹತ್ಯೆಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಪ್ರತಿಭಟನಾಕಾರರು, ಮಣಿಪುರದ ಇಂಫಾಲ್‌ನಲ್ಲಿರುವ ಇಬ್ಬರು ಸಚಿವರು ಮತ್ತು ಮೂವರು ಶಾಸಕರ ನಿವಾಸಗಳಿಗೆ ನುಗ್ಗಿದ್ದಾರೆ.
ಶಾಸಕರ ಮನೆಗಳ ಮೇಲೆ ಗುಂಪು ದಾಳಿಗಳ ಹಿನ್ನೆಲೆಯಲ್ಲಿ ಇಂಫಾಲ್ ಪಶ್ಚಿಮ ಆಡಳಿತ ಅನಿರ್ದಿಷ್ಟ ಅವಧಿಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ. ಇಂಫಾಲ್ ಪಶ್ಚಿಮ ಜಿಲ್ಲಾ ಮ್ಯಾಜಿಸ್ಟ್ರೇಟ್ ಟಿ.ಕಿರಣಕುಮಾರ್ ಹೊರಡಿಸಿದ ಆದೇಶದ ಪ್ರಕಾರ, ಶನಿವಾರ ಸಂಜೆ 4.30 ರಿಂದ ಕರ್ಫ್ಯೂ ವಿಧಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಅವರ ಲ್ಯಾಂಫೆಲ್ ಸನಕೀತೆಲ್ ಪ್ರದೇಶದಲ್ಲಿರುವ ನಿವಾಸಕ್ಕೆ ಗುಂಪೊಂದು ನುಗ್ಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಸಗೋಲ್‌ಬಂದ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಬಿಜೆಪಿ ಶಾಸಕ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಅಳಿಯ ಕೂಡ ಆಗಿರುವ ಆರ್‌ಕೆ ಇಮೊ ಅವರ ನಿವಾಸದ ಮುಂದೆ ಜಮಾಯಿಸಿ ‘ಸರ್ಕಾರದಿಂದ ಸೂಕ್ತ ಪ್ರತಿಕ್ರಿಯೆಗೆ’ ಒತ್ತಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ. ಮೂವರ ಹತ್ಯೆ ಮತ್ತು ’24 ಗಂಟೆಗಳ ಒಳಗೆ ಅಪರಾಧಿಗಳನ್ನು ಬಂಧಿಸಲು’ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕೇಶಾಮ್‌ಥಾಂಗ್ ಕ್ಷೇತ್ರದ ಪಕ್ಷೇತರ ಶಾಸಕ ಸಪಂ ನಿಶಿಕಾಂತ ಸಿಂಗ್ ಅವರನ್ನು ಟಿಡ್ಡಿಮ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಭೇಟಿ ಮಾಡಲು ಬಂದಿದ್ದ ಪ್ರತಿಭಟನಾಕಾರರು, ಶಾಸಕರು ರಾಜ್ಯದಲ್ಲಿ ಇಲ್ಲ ಎಂದು ತಿಳಿಸಿದ ನಂತರ ಅವರ ಒಡೆತನದ ಸ್ಥಳೀಯ ಪತ್ರಿಕೆಯ ಕಚೇರಿ ಕಟ್ಟಡವನ್ನು ಗುರಿಯಾಗಿಸಿದರು ಎಂದು ಹಿರಿಯ ಅಧಿಕಾರಿಯೊಬ್ಬರು ಇದೇ ವೇಳೆ ಮಾಹಿತಿ ನೀಡಿದ್ದಾರೆ.