ಚಿತ್ರದುರ್ಗದಲ್ಲಿ ಬಿಜೆಪಿ ಜನಪ್ರತಿನಿಧಿಗಳ ರಾಜ್ಯ ಮಟ್ಟದ ಸಮಾವೇಶ: ಸಚಿವ ಬಿ.ಶ್ರೀರಾಮುಲು

ಹೊಸ ದಿಗಂತ ವರದಿ, ಚಿತ್ರದುರ್ಗ:

ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಜೂ.18 ರಂದು ಬಿಜೆಪಿ ಜನಪ್ರತಿನಿಧಿಗಳ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಉಸ್ತುವಾರಿ ಮತ್ತು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಜೆಡಿಎಸ್ ಮುಖಂಡ ಎತ್ನಟ್ಟಿ ಗೌಡ ಅವರ ಬಿಜೆಪಿ ಪಕ್ಷ ಸೇರ್ಪಡೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಸದಸ್ಯರು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಬಿಜೆಪಿ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆ 14ನೇ ಹಣಕಾಸಿನ ಬಗ್ಗೆ ಬಗ್ಗೆ ಪಂಚಾಯಿತಿ ಸದಸ್ಯರ ಜೊತೆಯಲ್ಲಿ ಚರ್ಚೆ ನಡೆಯಲಿದೆ ಎಂದರು.
ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಗಮಿಸಲಿದ್ದಾರೆ. ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ. ಸೇವೆ, ಸಂಘಟನೆ ಮತ್ತು ಸರ್ಕಾರದ ಯೋಜನೆಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ. ಸರ್ಕಾರಗಳ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡುವ ಕಾರ್ಯ ಆಗಲಿದೆ ಎಂದು ಹೇಳಿದರು.
ಬಿಜೆಪಿ ಬೆಳವಣಿಗೆ, ತತ್ವ ಸಿದ್ಧಾಂತವನ್ನು ಒಪ್ಪಿ ಬೇರೆ ಬೇರೆ ಪಕ್ಷಗಳಲ್ಲಿನ ನಾಯಕರು ಬಿಜೆಪಿ ಸೇರುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದ ಹಲವಾರು ನಾಯಕರು ನಮ್ಮ ಪಕ್ಷ ಸೇರುತ್ತಿದ್ದಾರೆ. ಇದರಿಂದ ನಮ್ಮ ಪಕ್ಷ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಮಹಮ್ಮದ್ ಪೈಂಗಬರ್ ಬಗ್ಗೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪಕ್ಷದ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವರು. ಪಕ್ಷ ತೀರ್ಮಾನ ಮಾಡಿದ ಮೇಲೆ ನಾನು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ. ಯಾರೇ ಆಗಲಿ ಹಿಂಸೆ ಮಾಡುವುದು, ಜನರನ್ನು ಪ್ರಚೋದಿಸುವ ಕಾರ್ಯ ಮಾಡಬಾರದು. ಇತಿಹಾಸವನ್ನು ಕೆದಕಬಾರದು. ಎಲ್ಲರೂ ಶಾಂತಿ ಕಾಪಾಡಬೇಕೆಂಬ ಉದ್ದೇಶದಿಂದ ನಮ್ಮ ಪಕ್ಷ ಉತ್ತಮ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂದರು.
ಪಠ್ಯ ಪರಿಷ್ಕರಣೆ ಸಮಿತಿ ವಿಸರ್ಜನೆ ಮಾಡಲಾಗಿದೆ. ಇದಾದ ನಂತರವೂ ವಿರೋಧ ಪಕ್ಷದವರು ಸುಮ್ಮನೆ ವಿವಾದ ಎಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ತನ್ನ ಬೇಳೆ ಬೇಯಿಸಿಕೊಳ್ಳುವ ರಾಜಕಾರಣ ಮಾಡುತ್ತಿದೆ. ಸಮಿತಿ ವಿಷರ್ಜನೆ ಆದ ಮೇಲೆ ವಿವಾದ ಅಂತ್ಯ ಕಾಣಬೇಕು. ಪಠ್ಯ ಬದಲಾವಣೆಯ ಬಗ್ಗೆ ಮುಖ್ಯಮಂತ್ರಿಗಳು ಆಲೋಚನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಸಂಬಂಧಿಸಿದವರ ಜೊತೆ ಮುಕ್ತ ಚರ್ಚೆ ಮಾಡುತ್ತಿದ್ದಾರೆ ಎಂದು ಹೇಳಿದರು.
ವಿಜೇಯೇಂದ್ರ ಮುಂದಿನ ಮುಖ್ಯಮಂತ್ರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಮುಖ್ಯಮಂತ್ರಿಗಳು ಯಾರಾಗಬೇಕೆಂಬುದನ್ನು ಪಕ್ಷದ ಮುಖಂಡರು, ರಾಷ್ಟ್ರೀಯ ಅಧ್ಯಕ್ಷರು, ಗೃಹ ಮಂತ್ರಿಗಳು ಮತ್ತು ಪ್ರಧಾನ ಮಂತ್ರಿ ಸೇರಿ ತೀರ್ಮಾನ ಮಾಡುತ್ತಾರೆ. ಇಲ್ಲಿ ನಾವು ಹೇಳಿದ್ದೇವೆ, ಆವರು ಹೇಳಿದ್ದಾರೆ ಇವರು ಮುಖ್ಯಮಂತ್ರಿಗಳಾಗುತ್ತಾರೆ ಎಂಬುದು ಸರಿಯಲ್ಲ ಎಂದರು.
ನಾಯಕ ಜನಾಂಗಕ್ಕೆ 7.5 ಮೀಸಲಾತಿ ಸಿಗಬೇಕೆಂಬ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರ ಜಾರಿಗೆ ಕಾನೂನಾತ್ಮಕವಾದ ತೂಡಕು ಇರುವುದರಿಂದ ತಡವಾಗುತ್ತಿದೆ. ಅದರ ನಿವಾರಣೆ ನಂತರ ಜಾರಿ ಮಾಡಲಾಗುವುದು. ಇದರ ಬಗ್ಗೆ ಯಾವುದೇ ಅನುಮಾನ ಬೇಡ. ಇದಕ್ಕೆ ಸರ್ಕಾರ ಬದ್ದವಾಗಿದೆ. ಮುಖ್ಯಮಂತ್ರಿ ಸಹಾ ಮೀಸಲಾತಿ ಹೆಚ್ಚಳ ಮಾಡಲು ಮುಂದಾಗಿದ್ದಾರೆ. ನಾನು ಡಿಸಿಎಂ ಆಗಬೇಕೆಂಬುದು ಜನತೆ ಆಸೆಯಾಗಿತ್ತು. ಈ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ಪಕ್ಷವೊಂದೇ ದೇಶದಲ್ಲಿ ದೊಡ್ಡ ಪಕ್ಷವಾಗಿದೆ. ಇಲ್ಲಿ ಯಾವುದೇ ರೀತಿಯ ಬಿ-ಟೀಮ್ ಇಲ್ಲ. ಇರುವುದೆಲ್ಲಾ ಒಂದೇ, ಅದು ಬಿಜೆಪಿ ಪಕ್ಷ ಮಾತ್ರ, ಮುಂದಿನ ದಿನಮಾನದಲ್ಲಿ ಬಿಜೆಪಿ ಮಾತ್ರ ಉಳಿಯುವ ಪಾರ್ಟಿಯಾಗಲಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿ.ಆರ್.ಹಳ್ಳಿ ಗ್ರಾ.ಪಂ. ಅಧ್ಯಕ್ಷ ಹೊನ್ನೂರಪ್ಪ ಕಾಂಗ್ರೆಸ್ ಪಕ್ಷ ತೊರೆದು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!