ನವೆಂಬರ್‌ ಮೊದಲಾರ್ಧದಲ್ಲಿ ಭಾರತೀಯ ಈಕ್ವಿಟಿ ಮಾರುಕಟ್ಟೆಗೆ ಹೂಡಿಕೆಯಾಗಿದೆ 28 ಸಾವಿರ ಕೋಟಿ ರೂಪಾಯಿಗೂ ಅಧಿಕ ವಿದೇಶೀ ಬಂಡವಾಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಕ್ಟೋಬರ್‌ ತಿಂಗಳಲ್ಲಿ ಅಮೆರಿಕದ ಫೆಡರಲ್‌ ಬ್ಯಾಂಕ್‌ ಬಡ್ಡಿದರದ ಹೆಚ್ಚಳದಿಂದ ಭಾರತೀಯ ಷೇರುಪೇಟೆಯಿಂದ ಹೂಡಿಕೆ ಹಿಂತೆಗೆದುಕೊಂಡಿದ್ದ ಅನೇಕ ವಿದೇಶಿ ಹೂಡಿಕೆದಾರರು ನವೆಂಬರ್‌ ತಿಂಗಳ ಮೊದಲಾರ್ಧದಲ್ಲಿ ಭಾರತೀಯ ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಿದ್ದಾರೆ. ನವೆಂಬರ್‌ನ ಮೊದಲ ಹದಿನೈದು ದಿನಗಳಲ್ಲಿ 28,888 ಕೋಟಿ ರೂ.ಗಳಷ್ಟು ಹೂಡಿಕೆ ಹರಿದುಬಂದಿದೆ. ಇದು ಈ ವರ್ಷದ ಉಳಿದ ತಿಂಗಳುಗಳಿಗಿಂತ ಅತ್ಯುತ್ತಮ ಹೂಡಿಕೆಯಾಗಿದೆ.
.
ನವೆಂಬರ್ ಮೊದಲ ಹದಿನೈದು ದಿನಗಳಲ್ಲಿ, ಭಾರತದ ಬೆಂಚ್ಮಾರ್ಕ್ ಸೂಚ್ಯಂಕಗಳಾದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಎರಡೂ ಮೇಲ್ಮುಖವಾದ ಪಥದಲ್ಲಿವೆ. ನಿಫ್ಟಿ 50ಯು 2.2 ಶೇ. ಗಳಿಸಿದರೆ, ಸೆನ್ಸೆಕ್ಸ್ 1.9 ಶೇ. ಏರಿಕೆಯಾಗಿದೆ. ಬುಧವಾರದ ವಹಿವಾಟಿನ ಮೊದಲಾರ್ಧದಲ್ಲಿ ಎರಡೂ ಸೂಚ್ಯಂಕಗಳು ಹೊಸ ಸಾರ್ವಕಾಲಿಕ ಗರಿಷ್ಠಗಳನ್ನು ಸೃಷ್ಟಿಸಿವೆ. ಇನ್ನೂ ಹೆಚ್ಚಿನ ಸಂಭವನೀಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ವರ್ಷಾಂತ್ಯದ ವೇಳೆಗೆ ಇದು ನಿಫ್ಟಿ 50 ಅನ್ನು 19,000 ಮಾರ್ಕ್‌ಗಿಂತ ಮೇಲಕ್ಕೆ ಕೊಂಡೊಯ್ಯಬಹುದು ಎಂದು ಕೆಲ ತಜ್ಞರು ಹೇಳಿದ್ದಾರೆ. ಈ ವರ್ಷದ ಅಗಸ್ಟ್‌ ತಿಂಗಳನ್ನು ಹೊರತುಪಡಿಸಿದರೆ ನವೆಂಬರ್‌ ಮೊದಲಾರ್ಧದ ಹೂಡಿಕೆಯು ಅತ್ಯಂತ ಹೆಚ್ಚು ವಿಸ್ತರಣೆಯಾಗಿದೆ. ಅಗಸ್ಟ್‌ ತಿಂಗಳಿನಲ್ಲಿ 51,204 ಕೋಟಿ ರೂ. ಮೌಲ್ಯದ ಈಕ್ವಿಟಿಗಳನ್ನು ವಿದೇಶಿ ಹೂಡಿಕೆದಾರರು ಖರೀದಿಸಿದ್ದರು.

ಅಕ್ಟಬರ್‌ ತಿಂಗಳಿನಲ್ಲಿ ಜಾಗತಿಕ ಸೂಚನೆಗಳ ಕಾರಣದಿಂದಾಗಿ ಎಫ್‌ಪಿಐಗಳು ನಿವ್ವಳ ಮಾರಾಟಗಾರರಾಗಿದ್ದರು. ನಿವ್ವಳ ಈಕ್ವಿಟಿ ಹೊರಹರಿವು 7,458 ಕೋಟಿ ರೂ.ಗಳಷ್ಟಿತ್ತು. ಆದರೆ ಇದು ನವೆಂಬರ್‌ ತಿಂಗಳಲ್ಲಿ ವ್ಯತಿರಿಕ್ತವಾಗಿದ್ದು 7,449 ಕೋಟಿ ರೂ. ಮೌಲ್ಯದ ಈಕ್ವಿಟಿಗಳನ್ನು ಎಫ್‌ಪಿಐಗಳು ಖರೀದಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!