ಈ ಊರಿನಲ್ಲಿ ಕಸದ ರಾಶಿಗೆ ನಿತ್ಯ ಪೂಜೆ, ಸಾಂಕ್ರಾಮಿಕ ರೋಗ ತಡೆಗೆ ವಿಶೇಷ ಆಚರಣೆ

– ಗಣೇಶ ಜೋಶಿ ಸಂಕೊಳ್ಳಿ

ಕುಮಟಾ: ಕೆಲ ದಿನದ ಹಿಂದೆ ತಾಲೂಕಿನ ಹೊನ್ಮಾವ್ ಬಸ್ ನಿಲ್ದಾಣದ ಸಮೀಪ ಬಿದ್ದಿದ್ದ ರಾಶಿ ರಾಶಿ ಕಸದ ಜೊತೆಗೆ ದೇವತಾ ಮೂರ್ತಿ, ಅದಕ್ಕೂ ನಡೆಯುತ್ತಿದ್ದ ನಿತ್ಯ ಆರಾಧನೆ ಇವೆಲ್ಲವೂ ತಾಲೂಕಿನ ಜನರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಇದೇ ಕಸದ ರಾಶಿಗಳು ಮೀನುಪೇಟೆ ಮಾರ್ಗದಲ್ಲಿ ಪಟ್ಟಣ ಪ್ರವೇಶದ ದಾರಿಯ ಪಕ್ಕದಲ್ಲಿದ್ದು, ಇಲ್ಲಿಯೂ ಈ ಕಸದ ರಾಶಿಗೆ ನಿತ್ಯ ಆರಾಧನೆ ನಡೆಯುತ್ತಿದೆ.

ಇದೇನು ವಿಶೇಷ ಎಂಬಂತೆ ಜನರು ಆಶ್ಚರ್ಯಚಕಿತರಾಗಿ ನೋಡುವುದೂ ಇದೆ. ಆದರೆ ಇದು ಕೇವಲ ಕಸವಲ್ಲ, ಕಸದ ರಾಶಿಯ ನಡುವಿನಲ್ಲಿಯೂ ದೇವರನ್ನು ಕಾಣುವ ವಿಶೇಷ ಆಚರಣೆ! ಅದಷ್ಟೇ ಅಲ್ಲ, ಸಾಂಕ್ರಾಮಿಕ ತಡೆಗೆ ಹಾಗೂ ಕಸ ವಿಲೇವಾರಿಗೆ ಕಂಡುಕೊಂಡ ಸುಂದರವಾದ ವ್ಯವಸ್ಥೆಯೂ ಹೌದು.

ಇದು ಮೂಲತಃ ತಮ್ಮ ತಮ್ಮ ಊರಿಗೆ ಮಾರಿ ರೋಗ ಬರದಂತೆ ತಡೆಯುವ ಮತ್ತು ಪರಿಸರ ಸ್ನೇಹಿಯಾದ ಆಚರಣೆ, ಹರಕು ಮುರುಕಾದ ಒಂದಿಷ್ಟು ಹಳೆಯ ವಸ್ತುಗಳು, ಕಸದ ರಾಶಿಯ ದೊಡ್ಡದೊಡ್ಡ ಗಂಟು ಮೂಟೆಗಳು, ಅಲ್ಲೊಂದು ಮರದ ಹೆಣ್ಣುಗೊಂಬೆ, ಇವುಗಳ ಬಳಿ ಬಳೆ, ಕುಂಕುಮ, ಕೆಲವು ನಾಣ್ಯಗಳು, ತೊಟ್ಟಿಲುಗಳು, ದೇವರ ಭಾವಚಿತ್ರಗಳು ಇದೆಲ್ಲವೂ ಇದರಲ್ಲಿ ಕಾಣಸಿಗುತ್ತದೆ. ಇದುವೇ ಮಾರಿಹೊರೆ.

ವಾಸ್ತವಿಕವಾಗಿ ಈ ರಾಶಿಯಲ್ಲಿರುವ ಗೊಂಬೆ ಮಾರಿಯಮ್ಮನಲ್ಲ. ಇದು ಊರು ಕೇರಿಯವರು ಗುಡಿಸಿ ಹಾಕಿದ ಕಸದ ರಾಶಿಗೆ ಸಂಬಂಧಪಟ್ಟ ದೇವರು ಉಡುಗಲಜ್ಜಿ ಎಂಬ ನಾಮಧೇಯ ಇದಕ್ಕೆ, ಉಡುಗು ಅಂದರೆ ಗುಡಿಸು, ಕಸವನ್ನು ಒಟ್ಟುಮಾಡು, ಹೊರಹಾಕು, ನಾಶ ಮಾಡು ಎಂಬ ಅರ್ಥಗಳಿವೆ. ಹೀಗಾಗಿ ಊರಿನ ಕಸವನ್ನು ಹೊರಹಾಕುವ ತನ್ಮೂಲಕ ಗ್ರಾಮದಲ್ಲಿ ಎದುರಾಗುವ ಸಾಂಕ್ರಾಮಿಕ ತಡೆಗೆ ಸಹಜ ಪ್ರಯತ್ನವೇ ಈ ಕಾರ್ಯ,

ಕರ್ನಾಟಕದ ಹಲವಾರು ಹಳ್ಳಿ ಪಟ್ಟಣಗಳಲ್ಲಿ ಊರಿಂದೂರಿಗೆ ಈ ಬಗೆಯ ಮಾರಿ ಹೊರೆಯನ್ನು ಒಯ್ದಿಡುವ ಮತ್ತು ಅಲ್ಲಿಂದ ಮುಂದೆ ಸಾಗಿಸುವ ಆಚರಣೆ ಹಲವು ಕಾಲದಿಂದ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಪ್ರಾಜ್ಞರು. ಹಿಂದಿನ ಊರಿನಿಂದ ಬಂದು ಮುಂದಿನ ಊರಿಗೆ ಅದು ಪ್ರವೇಶಗೊಂಡಾಗ, ಮಾರಿಹೊರೆಯು ಪ್ರವೇಶಗೊಂಡಿರುವ ಊರಿನ ನಿಗದಿತ ಜನರು ಅದನ್ನು ತಮ್ಮ ಊರಿನ ಗಡಿ ದಾಟಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರಂತೆ. ಈ ಜನ ಪ್ರತಿವರ್ಷ ಅದನ್ನು ಮುಂದಿನ ಊರಿನ ನಿಗದಿತ ಜಾಗಕ್ಕೆ ಒಯ್ದಿಡುತ್ತಾರೆ. ಆದರೆ ಈ ಬಗ್ಗೆ ಎಲ್ಲಿಯೂ ಲಿಖಿತ ದಾಖಲೆಯಿಲ್ಲ, ಪುರಾಣ ಕತೆಗಳ ಅವಾಂತರವೂ ಇಲ್ಲಿಲ್ಲ. ಈ ಕಾರ್ಯವನ್ನು ಇವರು ತಮ್ಮ ಊರಿಗೆ ಸಲ್ಲಿಸುವ ಸೇವಾಕಾರ್ಯವೆಂದು ಭಾವಿಸುತ್ತಾರೆ ಎನ್ನಲಾಗಿದೆ.

ಪರಿಸರಕ್ಕೆ ತನ್ನದೇ ಕೊಡಗು ನೀಡುವ, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸಹಾಯ ನೀಡುವ ಇಂತಹ ಅನೇಕ ಸಂಪ್ರದಾಯಗಳು ನಮ್ಮಲ್ಲಿದೆ. ಉಡುಗಲಜ್ಜೆ ಹೊರೆ ಕೇವಲ ಕಥೆಯಾಗಿ ಉಳಿಯದೆ, ನಮ್ಮೆಲ್ಲರ ನಡುವಿನಲ್ಲಿ ಅರ್ಥವತ್ತಾಗಿ ಸಾಗುತ್ತಿರುವುದು ವಿಶೇಷವಾಗಿದೆ ಎಂದು ಸ್ಥಳೀಯ ನಿವಾಸಿ ನಾಗರಾಜ ನಾಯ್ಕ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!